ಅಬುಧಾಬಿ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದು ಶ್ರೇಯಸ್ ಅಯ್ಯರ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಅಬುಧಾಬಿ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.
ಆಡಿರುವ 10 ಪಂದ್ಯಗಳಲ್ಲಿ ಕೋಲ್ಕತ್ತಾ 5ರಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 10ರಲ್ಲಿ 7 ಪಂಧ್ಯ ಗೆದ್ದಿದ್ದು, ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಇರಾದೆ ಇಟ್ಟುಕೊಂಡಿದೆ.
ಡೆಲ್ಲಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆದರೆ, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಹೊರತುಪಡಿಸಿ ಯಾವೊಬ್ಬ ಆಟಗಾರರು ಕೂಡ ಉತ್ತಮ ಪ್ರದರ್ಶನ ತೋರಲಿಲ್ಲ. ಪೃಥ್ವಿ ಶಾ ಕಳೆದ ಕೆಲ ಪಂದ್ಯಗಳಿಂದ ವೈಫಲ್ಯ ಅನುಭವಿಸುತ್ತಿದ್ದಾರೆ. ಶ್ರೇಯಸ್ ಐಯ್ಯರ್, ಪಂತ್, ಸ್ಟೊಯ್ನೀಸ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ 2 ಪಂದ್ಯಗಳಲ್ಲಿ ಶತಕ ಸಿಡಿಸಿರುವ ಶಿಖರ್ ಧವನ್ ಡೆಲ್ಲಿಗೆ ಭರವಸೆಯ ಆಟಗಾರರಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಕ್ಯಾಪಿಟಲ್ಸ್ ಮೇಲುಗೈ ಹೊಂದಿದೆ. ಕಗಿಸೊ ರಬಾಡ, ನೋರ್ಟ್ಜೆ, ಅಕ್ಸರ್ ಪಟೇಲ್, ಆರ್.ಅಶ್ವಿನ್, ಸ್ಟೋಯ್ನಿಸ್ ಉತ್ತಮವಾಗಿ ಸ್ಪೆಲ್ ಮಾಡುತ್ತಿದ್ದಾರೆ.