ನವದೆಹಲಿ:ವಿಕೆಟ್ ಕೀಪರ್, ಬ್ಯಾಟ್ಸ್ಮನ್ ರಿಷಭ್ ಪಂತ್ರನ್ನು ನೂತನ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ಘೋಷಿಸಿದೆ. ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು 14ನೇ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಉಪನಾಯಕನಾಗಿದ್ದ ರಿಷಭ್ ಪಂತ್ರನ್ನು ನಾಯಕನಾಗಿ ನೇಮಕ ಮಾಡಲಾಗಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದರು. ನಂತರ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದ ಅವರಿಗೆ ಸುಮಾರು 5 ರಿಂದ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದರು. ಈ ಕಾರಣ ಡೆಲ್ಲಿ ತಂಡಕ್ಕೆ ನೂತನ ಸಾರಥಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ಎದುರಾಗಿತ್ತು.
ಬಹುಪಾಲು ಕ್ರಿಕೆಟ್ ತಜ್ಞರು, ಅಭಿಮಾನಿಗಳು ತಂಡದಲ್ಲಿ ಅನುಭವಿಗಳಾಗಿರುವ ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ, ಧವನ್ ಮತ್ತು ಸ್ಟೀವ್ ಸ್ಮಿತ್ರಂತಹ ಆಟಗಾರರನ್ನು ನಾಯಕನಾಗಿ ನೇಮಿಸಬಹುದು ಎಂದಿದ್ದರು. ಆದರೆ ಫ್ರಾಂಚೈಸಿ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಂತ್ರನ್ನು ಈ ದೊಡ್ಡ ಜವಾಬ್ದಾರಿಗೆ ನೇಮಿಸಿದೆ.
"ಶ್ರೇಯಸ್ ಅಯ್ಯರ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅಯ್ಯರ್ ನಾಯಕತ್ವದಲ್ಲಿ ನಮ್ಮ ತಂಡವನ್ನು ಎತ್ತರಕ್ಕೆ ಕೊಂಡೊಯ್ದಿದ್ದರು. ಈ ವರ್ಷ ಅವರನ್ನು ತಂಡ ತುಂಬಾ ಮಿಸ್ ಮಾಡಿಕೊಳ್ಳಲಿದೆ. ಅವರ ಅನುಪಸ್ಥಿತಿಯಲ್ಲಿ ಪಂತ್ ಈ ವರ್ಷ ತಂಡವನ್ನು ಮುನ್ನಡೆಸಲಿದ್ದಾರೆ. ದುರಾದೃಷ್ಟಕರ ಸಂದರ್ಭದಲ್ಲಿ ಪಂತ್ಗೆ ಈ ಅವಕಾಶ ದೊರೆತಿದೆ, ಇದು ಅವರು ಕ್ರಿಕೆಟ್ನಲ್ಲಿ ಬೆಳೆಯಲು ಅದ್ಭುತವಾದ ಅವಕಾಶ. ಈ ಹೊಸ ಜವಾಬ್ದಾರಿಯಲ್ಲಿ ಯಶಸ್ವಿಯಾಗಲಿ ಎಂದು ನಾನು ಅವರಿಗೆ ಶುಭಕೋರುತ್ತೇನೆ" ಎಂದು ಡೆಲ್ಲಿ ಕ್ಯಾಪಿಟಲ್ಸ್ ಅಧ್ಯಕ್ಷ ಮತ್ತು ಸಹ ಮಾಲೀಕ ಕಿರಣ್ ಕುಮಾರ್ ಗ್ರಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2020-21ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯದ್ಭುತ ಫಾರ್ಮ್ನಲ್ಲಿರುವ ರಿಷಭ್ ಪಂತ್ ಪ್ರಸ್ತುತ ಆವೃತ್ತಿಯಲ್ಲಿ ಕೊಹ್ಲಿ, ರೋಹಿತ್ ಮತ್ತು ರಾಹುಲ್ ಅಂತಹ ಆಟಗಾರರನ್ನೇ ಹಿಂದಿಕ್ಕಿ ಗರಿಷ್ಠ ರನ್ ಬಾರಿಸಿರುವ ಬ್ಯಾಟ್ಸ್ಮನ್ ಆಗಿದ್ದಾರೆ. ಸಮಯಕ್ಕೆ ಅನುಗುಣವಾಗಿ ಬ್ಯಾಟಿಂಗ್ ಮಾಡುವುದನ್ನು ಮೈಗೂಡಿಸಿಕೊಂಡಿರುವುದಕ್ಕೆ ಅವರನ್ನು ಡೆಲ್ಲಿ ನಾಯಕನಾಗಿ ಆಯ್ಕೆಮಾಡಿದೆ.