ಸೂರತ್:ಸಯ್ಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಮೆಂಟ್ನಲ್ಲಿ ರಾಜಸ್ಥಾನದ ನಾಯಕ ದೀಪಕ್ ಚಹಾರ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಮ್ಮ ತಂಡವನ್ನು ಸೆಮಿಫೈನಲ್ಗೆ ಕೊಂಡೊಯ್ದಿದ್ದಾರೆ.
ಧೋನಿ ನಾಯಕತ್ವದಲ್ಲಿ ಬೆಳಕಿಗೆ ಬಂದ ದೀಪಕ್ ಚಹಾರ್ ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಭಾರತಕ್ಕೆ ಸರಣಿ ಜಯ ತಂದುಕೊಟ್ಟಿದ್ದರು. ಮತ್ತೆ ಎರಡು ದಿನಗಳ ನಂತರ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ವಿದರ್ಭ ವಿರುದ್ಧ ಹ್ಯಾಟ್ರಿಕ್ ಪಡೆದು ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು.
ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಆದರೆ ಬೌಲಿಂಗ್ನಿಂದಲ್ಲ, ಬದಲಾಗಿ ಬ್ಯಾಟಿಂಗ್ ಪ್ರದರ್ಶನದಿಂದ. ತಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ.
ಬುಧವಾರ ದೆಹಲಿ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 50 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಇಳಿದ ದೀಪಕ್ ಚಹಾರ್, 42 ಎಸೆತಗಳಲ್ಲಿ 7 ಸಿಕ್ಸರ್ ಸಹಿತ 55 ರನ್ ಗಳಿಸಿ ಔಟಾಗದೆ ಉಳಿದರು. ಇವರ ಬ್ಯಾಟಿಂಗ್ ನೆರವಿನಿಂದ 134 ರನ್ಗಳ ಟಾರ್ಗೆಟ್ ನೀಡಿಯೂ ರಾಜಸ್ಥಾನ 2 ರನ್ಗಳ ಜಯ ಸಾಧಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ಈಗಾಗಲೇ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿರುವ ದೀಪಕ್ ಚಹಾರ್ಗೆ ಬ್ಯಾಟಿಂಗ್ನಲ್ಲಿ ಅವಕಾಶ ಕಲ್ಪಿಸಿಕೊಟ್ಟರೆ ಭಾರತ ತಂಡದಲ್ಲಿ ಖಾಲಿ ಇರುವ ಆಲ್ರೌಂಡರ್ ಸ್ಥಾನಕ್ಕೆ ಸೂಕ್ತವಾಗಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.