ಹೈದರಾಬಾದ್ :13 ವರ್ಷಗಳಲ್ಲಿ 3 ಬಾರಿ ಫೈನಲ್ ತಲುಪಿದರೂ ಒಮ್ಮೆಯೂ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲರಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಬಲಿಷ್ಠ ಮನೋಬಲದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
2019ರಲ್ಲಿ ಕೊನೆಯ ಸ್ಥಾನಿಯಾಗಿ ಟೂರ್ನಿ ಅಂತ್ಯಗೊಳಿಸಿದ್ದ ಬೆಂಗಳೂರು ಫ್ರಾಂಚೈಸಿ, 2021ರ ಮೊದಲಾರ್ಧದಲ್ಲಿ ಅಮೋಘ ಆಟ ಪ್ರದರ್ಶಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಸತತ 4 ಪಂದ್ಯಗಳಲ್ಲಿ ಸೋಲು ಕಂಡರೂ, ಪ್ಲೇ ಆಫ್ ತಲುಪುವಲ್ಲಿ ಯಶಸ್ವಿಯಾಗಿತ್ತು. ದುರಾದೃಷ್ಟವಶಾತ್ ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಾಣುವ ಮೂಲಕ ಮತ್ತೆ ನಿರಾಶೆಗೊಳಗಾಯಿತು.
ಆದರೆ, ಆರ್ಸಿಬಿ ಆಟದಲ್ಲಿ ಹಿಂದಿನ ಎರಡು ಆವೃತ್ತಿಗಳಿಗಿಂತ 2020ರ ಪ್ರದರ್ಶನ ತೃಪ್ತಿದಾಯಕವಾಗಿತ್ತು. ಇದೀಗ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಕಳೆದ ಬಾರಿ ವೈಫಲ್ಯ ಅನುಭವಿಸಿದ್ದ ಆ್ಯರೋನ್ ಫಿಂಚ್, ಮೊಯಿನ್ ಅಲಿ, ಗುರುಕಿರಾತ್ ಮನ್ ತಂಡದಿಂದ ಕೈಬಿಟ್ಟಿದೆ. ಮೊರೀಸ್ರನ್ನು ಬಿಟ್ಟು ಕೈಸುಟ್ಟುಕೊಂಡರೂ, ಅವರಷ್ಟೇ ಸಮರ್ಥರಾದ ಕೈಲ್ ಜೆಮೀಸನ್ರನ್ನು ಖರೀದಿಸಿ ನಷ್ಟ ಸರಿದೂಗಿಸಿಕೊಂಡಿದೆ.
ಮ್ಯಾಕ್ಸ್‌ವೆಲ್ ಬಲ :ಆರ್ಸಿಬಿಯ ವೈಫಲ್ಯವಾಗಿದ್ದ ಮಧ್ಯಮ ಕ್ರಮಾಂಕವನ್ನು ಸರಿದೂಗಿಸಲು ದುಬಾರಿ ಬೆಲೆ ಕೊಟ್ಟು ಮ್ಯಾಕ್ಸ್‌ವೆಲ್ (14.25 ಕೋಟಿ)ರನ್ನು ಸೇರಿಸಿಕೊಂಡಿರುವುದರಿಂದ ಆನೆಬಲ ಬಂದಂತಾಗಿದೆ. ಯಾಕೆಂದರೆ, ಈ ಬಾರಿ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿಯುವುದರಿಂದ ಎಬಿಡಿ 3 ವಿಕೆಟ್‌ಗೆ ಆಡಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್, ಅಜರುದ್ಧೀನ್, ಜೆಮೀಸನ್ ರಂತಹ ಆಟಗಾರರು ಇರುವುದರಿಂದ ಕೊಹ್ಲಿ ಮತ್ತು ಎಬಿಡಿ ತಮ್ಮ ಒತ್ತಡವಿಲ್ಲದೆ ನೈಜ ಆಟ ತೋರಿಸಲು ಅವಕಾಶ ಸಿಕ್ಕಿದೆ.
ಅಕಸ್ಮಾತ್ ಇವರಿಬ್ಬರು ವಿಫಲರಾದರೆ ಖಂಡಿತ ಮ್ಯಾಕ್ಸ್‌ವೆಲ್ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಯುಎಇನಲ್ಲಿ ಮ್ಯಾಕ್ಸ್‌ವೆಲ್ ವಿಫಲರಾಗಿರಬಹುದು. ಆದರೆ, ಪ್ರಸ್ತುತ ಅವರ ಫಾರ್ಮ್ ಖಂಡಿತ ಆರ್ಸಿಬಿಗೆ ವರದಾನವಾಗಲಿದೆ.
ವಿಕೆಟ್ ಕೀಪರ್ ಮತ್ತು ಮಧ್ಯಕ ಕ್ರಮಾಂಕಕ್ಕೆ ಅಜರುದ್ಧೀನ್ ಬಲ :ಕಳೆದ ಬಾರಿ ವಿಕೆಟ್ ಕೀಪರ್ ಆಗಿದ್ದ ಎಬಿಡಿ ವಿಲಿಯರ್ಸ್ ಒತ್ತಡದಲ್ಲಿ ಬ್ಯಾಟಿಂಗ್ ಮಾಡಬೇಕಿತ್ತು. ಆದರೆ, ಇದೀಗ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮೊಹಮ್ಮದ್ ಅಜರುದ್ದೀನ್ ತಂಡ ಸೇರಿದ್ದಾರೆ. ಈತ ವೃತ್ತಿಪರ ವಿಕೆಟ್ ಕೀಪರ್ ಜೊತೆಗೆ ಸ್ಫೋಟಕ ಬ್ಯಾಟಿಂಗ್ ನಡೆಸಬಲ್ಲ ಆಟಗಾರ. ಇದರಿಂದ ಮ್ಯಾಕ್ಸ್‌ವೆಲ್ ನಂತರ ಬ್ಯಾಟಿಂಗ್ ಮಾಡಲು ಒಳ್ಳೆಯ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಡೇನಿಯಲ್ ಕ್ರಿಸ್ಚಿಯನ್ :ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದಂತಿರುವ ಆಸ್ಟ್ರೇಲಿಯಾದ ಆಲ್ರೌಂಡರ ಡೇನಿಯಲ್ ಕ್ರಿಸ್ಚಿಯನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗವನ್ನು ಸಮಬಲವಾಗಿ ನಿಬಾಯಿಸುವಂತಹ ಆಟಗಾರ. ಮ್ಯಾಕ್ಸ್‌ವೆಲ್ ಮತ್ತು ಎಬಿಡಿ ನಂತರ 3 ಮತ್ತು 4ನೇ ವಿದೇಶಿ ಆಟಗಾರನ ಜಾಗಕ್ಕೆ ಈತನೂ ಕೂಡ ಅತ್ಯುತ್ತಮ ಆಯ್ಕೆ. ಆರ್ಸಿಬಿ ಡೇನಿಯಲ್ ಸ್ಯಾಮ್ಸ್, ಜೇಮಿಸನ್, ಜಂಪಾ ಮತ್ತು ಕ್ರಿಸ್ಟಿಯನ್ರಲ್ಲಿ ಇಬ್ಬರಿಗೆ ಅವಕಾಶ ನೀಡಬಹುದು.
ಬೌಲಿಂಗ್ ವಿಭಾಗಕ್ಕೆ ಲೀಡರ್ಗಳ ಕೊರತೆ :ಆರ್ಸಿಬಿಗೆ ಎಂದೂ ಮುಗಿಯದ ಸಮಸ್ಯೆಯೆಂದರೆ ಬೌಲಿಂಗ್ ವಿಭಾಗ. ಸಮರ್ಥ ವೇಗದ ಬೌಲರ್ ಕೊರತೆ ಈ ಬಾರಿಯೂ ಕಾಡಲಿದೆ. 15 ಕೋಟಿ ನೀಡಿರುವ ಕೈಲ್ ಜೆಮೀಸನ್ ತಂಡದ ಪ್ರಧಾನ ಬೌಲರ್ ಆಗಲಿದ್ದಾರೆ. ಆದರೆ, ಅವರ ಇತ್ತೀಚಿನ ಪ್ರದರ್ಶನ ನೋಡಿದರೆ ಆರ್ಸಿಬಿಗೆ ಹಿನ್ನಡೆಯಾಗಬಹುದು.
ಇದೇ ಮೊದಲ ಬಾರಿಗೆ ಭಾರತದ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುತ್ತಿರುವುದರಿಂದ ಅವರ ಸ್ವಿಂಗ್ ಯಶಸ್ವಿಯಾದರೆ ಆರ್ಸಿಬಿ ಚಿಂತೆ ಮರೆಯಾಗಲಿದೆ. ಇವರಿಗೆ ಹರ್ಷೆಲ್ ಪಟೇಲ್, ಸೈನಿ ಅಥವಾ ಸಿರಾಜ್ ಸಾಥ್ ನೀಡಲಿದ್ದಾರೆ. ಆದರೆ, ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಆರ್ಸಿಬಿ ಚಿಂತೆ ಮಾಡುವ ಅಗತ್ಯವಿಲ್ಲ.
ಚಹಾಲ್ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ ವಿಭಾಗವನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ. ಅರ್ಸಿಬಿ ಜನವರಿ 9ರಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಆರ್ಸಿಬಿ ತಂಡ :ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಫಿನ್ ಅಲೆನ್ (ವಿಕೆಟ್ ಕೀಪರ್), ಎಬಿ ಡಿವಿಲಿಯರ್ಸ್ , ಪವನ್ ದೇಶಪಾಂಡೆ, ವಾಷಿಂಗ್ಟನ್ ಸುಂದರ್, ಡೇನಿಯಲ್ ಸ್ಯಾಮ್ಸ್, ಯುಜ್ವೇಂದ್ರ ಚಾಹಲ್, ಆ್ಯಡಮ್ ಜಂಪಾ, ಶಹಬಾಜ್ ಅಹ್ಮದ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಕೇನ್ ರಿಚರ್ಡ್ಸನ್ ಪಟೇಲ್, ಹರ್ಷೆಲ್ ಪಟೇಲ್ ಗ್ಲೆನ್ ಮ್ಯಾಕ್ಸ್‌ವೆಲ್, ಸಚಿನ್ ಬೇಬಿ, ರಜತ್ ಪಾಟಿದಾರ್, ಮೊಹಮ್ಮದ್ ಅಜರುದ್ದೀನ್, ಕೈಲ್ ಜೆಮೀಸನ್, ಡೇನಿಯಲ್ ಕ್ರಿಸ್ಚಿಯನ್, ಸುಯಾಶ್ ಪ್ರಭುದೇಸಾಯಿ, ಕೆ.ಎಸ್.ಭರತ್