ಕರ್ನಾಟಕ

karnataka

ETV Bharat / sports

ಈ ವರ್ಷ ಪಂಜಾಬ್​ ಕಿಂಗ್ಸ್​ಗೆ ಡೆತ್​ ಓವರ್​ ಸಮಸ್ಯೆ ಇರಲ್ಲ.. ಶಮಿ ಭರವಸೆ - ಮೊಹಮ್ಮದ್ ಶಮಿ ಗಾಯದಿಂದ ಚೇತರಿಕೆ

ಕಳೆದ ಆವೃತ್ತಿಯಲ್ಲಿ ನಾನು ನನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇನೆ. ಕೆಲ ಪೇಸರ್​ಗಳಿಗೆ ನನ್ನಿಂದ ಸಾಧ್ಯವಾದ ಸಹಾಯ ಮಾಡಿದ್ದೇನೆ. ಈ ಬಾರಿ ಕೆಲವು ಉತ್ತಮ ವಿದೇಶಿ ಬೌಲರ್​ಗಳನ್ನು ಹೊಂದುವ ಮೂಲಕ ನಮ್ಮ ತಂಡ ಈ ಬಾರಿ ಅತ್ಯುತ್ತಮವಾಗಿದೆ..

ಪಂಜಾಬ್ ಕಿಂಗ್ಸ್​
ಮೊಹಮ್ಮದ್ ಶಮಿ

By

Published : Mar 28, 2021, 10:27 PM IST

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡಿದ್ದ ಹಿರಿಯ ವೇಗಿ ಮೊಹಮ್ಮದ್ ಶಮಿ, ಸಂಪೂರ್ಣ ಫಿಟ್​ ಆಗಿದ್ದಾರೆ. ಏಪ್ರಿಲ್ 9ರಿಂದ ಆರಂಭವಾಗಲಿರುವ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ತಂಡಕ್ಕೆ ಗಮನಾರ್ಹ ಕೊಡುಗೆ ನೀಡುವುದಕ್ಕೆ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಶಮಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ವೇಗಿ ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಚೆಂಡು ಮಣಿಕಟ್ಟಿಗೆ ಬಿದ್ದಿದ್ದರಿಂದ ಮೂಳೆ ಮುರಿದು ಸರಣಿಯಿಂದಲೇ ಹೊರ ಬಿದ್ದಿದ್ದರು. ನಂತರ ಎನ್​ಸಿಎ ಸೇರಿದ್ದ ಅವರು ಇದೀಗ ಸಂಪೂರ್ಣ ಫಿಟ್​ ಆಗಿದ್ದು, ಮಾರ್ಚ್​ 20ರಂದು ಐಪಿಎಲ್​ಗಾಗಿ ಅಲ್ಲಿಂದ ಬಿಡುಗಡೆಯಾಗಿದ್ದಾರೆ.

"ನಾನು ಸಂಪೂರ್ಣ ಚೇತರಿಸಿಕೊಂಡಿದ್ದೇನೆ ಮತ್ತು ಮುಂದೆ ಹೋಗಲು ಸಿದ್ಧನಾಗಿದ್ದೇನೆ. ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದು ದುರದೃಷ್ಟಕರವಾಗಿತ್ತು. ಯಾಕೆಂದರೆ, ನಾನು ದೀರ್ಘಕಾಲದವರೆಗೆ ಫಿಟ್ನೆಸ್ ಸಮಸ್ಯೆ ಹೊಂದಿರಲಿಲ್ಲ. ಏನೂ ಮಾಡಲು ಸಾಧ್ಯವಿಲ್ಲ, ಇದೆಲ್ಲವೂ ಆಟದ ಭಾಗವಾಗಿದೆ" ಎಂದು ಶಮಿ ಗಾಯಗೊಂಡಿದ್ದರ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಐಪಿಎಲ್​ ಬಗ್ಗೆ ಮಾತನಾಡಿದ ಶಮಿ, ಕಳೆದ ಆವೃತ್ತಿ ನನಗೆ ಅತ್ಯುತ್ತಮವಾಗಿತ್ತು. ಈ ವರ್ಷದ ಐಪಿಎಲ್​ನಲ್ಲೂ ನಾನು ಅದನ್ನು ಉಳಿಸಿಕೊಂಡು ಹೋಗಲು ಬಯಸುತ್ತೇನೆ. ಈ ಗಾಯದಿಂದ ಐಪಿಎಲ್​ನಂತಹ ಟೂರ್ನಿಗೆ ಸಿದ್ಧಗೊಳ್ಳುವುದಕ್ಕೆ ಸಾಕಷ್ಟು ಸಮಯ ಸಿಕ್ಕಂತಾಗಿದೆ ಎಂದರು.

ಡೆತ್​ ಓವರ್ ಬೌಲಿಂಗ್ ಸಮಸ್ಯೆ ಇರಲ್ಲ :ಕಳೆದ ಆವೃತ್ತಿಯಲ್ಲಿ ಬ್ಯಾಟಿಂಗ್​ನಲ್ಲಿ ಸಾಕಷ್ಟು ರನ್ ಬಾರಿಸಿದರೂ ಡೆತ್​ ಬೌಲಿಂಗ್​ ಬಲಿಷ್ಠವಾಗಿಲ್ಲದ ಕಾರಣ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸದರೆ ಆ ವಿಭಾಗ ಉತ್ತಮವಾಗಿದೆ. ಈ ಹಿಂದೆ ಏನು ಆಗಿದಿಯೋ ಅದನ್ನು ಬದಲಾಯಿಸಲು ಸಾಧ್ಯವಿಲ್ಲ.

ಕಳೆದ ಆವೃತ್ತಿಯಲ್ಲಿ ನಾನು ನನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇನೆ. ಕೆಲ ಪೇಸರ್​ಗಳಿಗೆ ನನ್ನಿಂದ ಸಾಧ್ಯವಾದ ಸಹಾಯ ಮಾಡಿದ್ದೇನೆ. ಈ ಬಾರಿ ಕೆಲವು ಉತ್ತಮ ವಿದೇಶಿ ಬೌಲರ್​ಗಳನ್ನು ಹೊಂದುವ ಮೂಲಕ ನಮ್ಮ ತಂಡ ಈ ಬಾರಿ ಅತ್ಯುತ್ತಮವಾಗಿದೆ ಎಂದು ಶಮಿ ತಿಳಿಸಿದ್ದಾರೆ.

ಪಂಜಾಬ್​ ಕಿಂಗ್ಸ್​ ಫೆಬ್ರವರಿಯಲ್ಲಿ ನಡೆದ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಜೇ ರಿಚರ್ಡ್ಸನ್​ರನ್ನು 14 ಕೋಟಿ ರೂ.​, ರಿಲೇ ಮೆರಿಡಿತ್​ಗೆ 10 ಕೋಟಿ ರೂ. ಮತ್ತು ಮೊಯಿಸಸ್​ ಹೆನ್ರಿಕ್ಸ್​ ಅವರನ್ನು 3.6 ಕೋಟಿ ರೂ. ನೀಡಿ ಖರೀದಿಸಿದೆ.

ABOUT THE AUTHOR

...view details