ಶಾರ್ಜಾ :ಕ್ವಿಂಟನ್ ಡಿಕಾಕ್ ಅರ್ಧಶತಕ ಹಾಗೂ ವೇಗಿಗಳ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 34 ರನ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮುಂಬೈಮೊದಲುಬ್ಯಾಟಿಂಗ್ ನಡೆಸಿತ್ತು. ಡಿಕಾಕ್ 67, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ 31, ಹಾರ್ದಿಕ್ ಪಾಂಡ್ಯ 28, ಪೊಲಾರ್ಡ್ 25 ಹಾಗೂ ಕೃನಾಲ್ ಪಾಂಡ್ಯರ 20 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತ್ತು.
209 ರನ್ಗಳ ಗುರಿ ಪಡೆದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ಗಳಿಸಲಷ್ಟೇ ಶಕ್ತವಾಗಿ 34 ರನ್ಗಳಿಂದ ಸೋಲನುಭವಿಸಿತು. ಎಸ್ಆರ್ಹೆಚ್ ನಾಯಕ ಡೇವಿಡ್ ವಾರ್ನರ್ 44 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 60 ರನ್ಗಳಿಸಿ ಟೂರ್ನಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ಆದರೆ, ಇವರಿಗೆ ತಂಡದಿಂದ ಸೂಕ್ತ ಬೆಂಬಲ ಸಿಗದ ಕಾರಣ ಹೈದರಾಬಾದ್ ತಂಡ ಸೋಲನುಭವಿಸಿತು.
ಬೈರ್ಸ್ಟೋವ್ 25 ಹಾಗೂ ಮನೀಶ್ ಪಾಂಡೆ 30 ರನ್ಗಳಿಸಿ ಉತ್ತಮ ಆರಂಭ ಪಡೆದ್ರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ವಿಲಿಯಮ್ಸನ್ 3 ಹಾಗೂ ಕಳೆದ ಪಂದ್ಯದ ಹೀರೋ ಗರ್ಗ್ 8 ಹಾಗೂ ಅಭಿಷೇಕ್ ಶರ್ಮಾ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅಬ್ದುಲ್ ಸಮಾದ್ 9 ಎಸೆತಗಳಲ್ಲಿ 29 ರನ್ ಸಿಡಿಸಿದರಾದ್ರೂ ಅವರ ಹೋರಾಟ ಸೋಲಿನ ಅಂತರ ಮಾತ್ರ ತಗ್ಗಿಸಿತು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಪ್ಯಾಟಿನ್ಸನ್ 29ಕ್ಕೆ 2, ಬೌಲ್ಟ್ 28ಕ್ಕೆ 2 ಹಾಗೂ ಬುಮ್ರಾ 41 ರನ್ ನೀಡಿ ದುಬಾರಿಯಾದ್ರೂ ಪ್ರಮುಖ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.