ನವದೆಹಲಿ: ಪ್ರಸಿದ್ಧ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂನ ಒಂದು ಸ್ಟ್ಯಾಂಡ್ಗೆ ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಹೆಸರನ್ನಿಡಲು ಡೆಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ನಿರ್ಧರಿಸಿದೆ.
ಭಾರತ ತಂಡಕ್ಕೆ ಒಬ್ಬ ಆಟಗಾರನಾಗಿ, ನಾಯಕನಾಗಿ ವಿರಾಟ್ ಕೊಹ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇಂದಿಗೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 11 ವರ್ಷ ಪೂರೈಸಿದ ನೆನೆಪಿನಲ್ಲಿ ಕೊಹ್ಲಿ ಹೆಸರನ್ನು ಕೋಟ್ಲಾ ಮೈದಾನದ ಒಂದು ಸ್ಟ್ಯಾಂಡ್ಗೆ ಇಡಲು ನಿರ್ಧರಿಸಲಾಗಿದೆ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾನ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿಯ ಸಾಧನೆ ಡಿಡಿಸಿಎಗೆ ತೃಪ್ತಿ ತಂದಿದೆ. ಕೊಹ್ಲಿ ತಮ್ಮ ನಾಯಕತ್ವದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಹಾಗಾಗಿ ಕೋಟ್ಲಾ ಸ್ಟೇಡಿಯಂನಲ್ಲಿ ಸ್ಟ್ಯಾಂಡ್ನ ಕೊಹ್ಲಿಗೆ ಅರ್ಪಿಸುತ್ತಿದ್ದೇವೆ. ಇದರಿಂದ ವಿರಾಟ್ ಕೊಹ್ಲಿ ದೆಹಲಿಯ ಸಾವಿರಾರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ.
ಸೆಪ್ಟೆಂಬರ್ 12 ರಂದು ಕೊಹ್ಲಿ ಹೆಸರಿನ ಸ್ಟ್ಯಾಂಡ್ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜಿಜು ಭಾಗವಹಿಸಲಿದ್ದಾರೆ.
ಕೊಹ್ಲಿಗೂ ಮೊದಲು ದೆಹಲಿ ಮಾಜಿ ಆಟಗಾರರಾದ ಬಿಷನ್ ಸಿಂಗ್ ಬೇಡಿ, ಮೋಹಿಂದರ್ ಅಮರ್ನಾಥ್ ಹೆಸರನ್ನು ಪಿರೋಜ್ ಶಾ ಕೋಟ್ಲಾ ಸ್ಟ್ಯಾಂಡ್ಗಳಿಗೆ ಅರ್ಪಿಸಲಾಗಿತ್ತು. ಇದೀಗ ಕೊಹ್ಲಿ ಮೂರನೇ ಆಟಗಾರನಾಗಿ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ. ಸ್ಫೋಟಕ ಬ್ಯಾಟ್ಸ್ಮನ್ ಸೆಹ್ವಾಗ್ ಹಾಗೂ ಮಹಿಳಾ ಕ್ರಿಕೆಟರ್ ಅಂಜುಮ್ ಚೋಪ್ರಾ ಅವರ ಹೆಸರನ್ನು ಮೈದಾನದ ಗೇಟ್ಗಳಿಗೆ ನಾಮಕರಣ ಮಾಡಲಾಗಿದೆ.