ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಜನವರಿ 13ರ ಒಳಗಾಗಿ ತನ್ನ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರೀಕ್ಷೆಯಿದ್ದು, ಎಲ್ಲ ಅಂದುಕೊಂಡಂತೆ ಆದರೆ, ಗೌತಮ್ ಗಂಭೀರ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಡಿಡಿಸಿಎ ಅಧಿಕಾರಿಯೊಬ್ಬರು, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕರಾದ ಗೌತಮ್ ಗಂಭೀರ್ ಅವರನ್ನ ಸಂಪರ್ಕಿಸಿದ್ದೇವೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿ ಅನುಭವ ಹೊಂದಿದ್ದಾರೆ. ಹಾದಿ ತಪ್ಪಿರುವ ಡಿಡಿಸಿಎ ಅನ್ನ ಮತ್ತೆ ಸರಿ ದಾರಿಗೆ ತರುವ ಶಕ್ತಿ ಅವರಲ್ಲಿದೆ ಎಂದಿದ್ದಾರೆ.
ಕೆಕೆಆರ್ ಅದೃಷ್ಟ ಬದಲಿಸುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅವರಲ್ಲಿನ ನಾಯಕತ್ವದ ಗುಣಗಳನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೇ ಮೆಚ್ಚುಕೊಂಡಿದ್ದಾರೆ. ಇಂತಾ ಸಮಯದಲ್ಲಿ ಡಿಡಿಸಿಎ ಆಡಳಿತವನ್ನು ವಹಿಸಿಕೊಳ್ಳಲು ಗಂಭೀರ್ ಪರಿಪೂರ್ಣ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವು ಬಿಜೆಪಿಗರು ಇತ್ತೀಚಿನ ದಿನಗಳಲ್ಲಿ ಡಿಡಿಸಿಎನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ನಿನ್ನೆ ನಡೆದ ಘಟನೆ ನಂತರ ಅವರಂತ ಕಟ್ಟುನಿಟ್ಟಾದ ಟಾಸ್ಕ್ ಮಾಸ್ಟರ್ ಅಧಿಕಾರ ವಹಿಸಿಕೊಳ್ಳುವುದು ಸೂಕ್ತ. ಗಂಭೀರ್ ಏನಾದರೂ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಒಪ್ಪಿಕೊಂಡರೆ ನೂತನ ವರ್ಷದಲ್ಲಿ ಅವರ ಅಧ್ಯಕ್ಷತೆಯಲ್ಲೆ ಸಭೆ ನಡೆಯಲಿದೆ ಎಂದಿದ್ದಾರೆ.
ಕ್ರಿಕೆಟ್ ಅಸೋಸಿಯೇಷನ್ ವಿಸರ್ಜನೆಗೆ ಗಂಭೀರ್ ಒತ್ತಾಯ...ಡಿಡಿಸಿಎ ಸಾಮಾನ್ಯ ಸಭೆಯಲ್ಲಿ ಘರ್ಷಣೆ
ನಿನ್ನೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡಿಡಿಸಿಎ ವಾರ್ಷಿಕ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಘರ್ಷಣೆ ಸಂಭವಿಸಿದ ನಂತರ ರಜತ್ ಶರ್ಮಾ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಸಭೆಯಲ್ಲಿ ಘರ್ಷಣೆ ನಡೆದ ವಿಡಿಯೋವನ್ನ ಟ್ವೀಟ್ ಮಾಡಿದ್ದ ಗೌತಮ್ ಗಂಭೀರ್, ಕೆಲವು ವಂಚಕರು ಸಂಘಟನೆಯನ್ನು ಹೇಗೆ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ನೋಡಿ. ಬಿಸಿಸಿಐ ಕೂಡಲೇ ಡಿಡಿಸಿಎ ವಿಸರ್ಜಿಸುವುದರ ಜೊತೆಗೆ ಘರ್ಷಣೆಯಲ್ಲಿ ಭಾಗಿಯಾದವರನ್ನು ಜೀವಿತಾವಧಿಯವರೆಗೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.