ನೇಪಿಯರ್:ನ್ಯೂಜಿಲ್ಯಾಂಡ್ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಡೇವಿಡ್ ಮಲನ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ಪರ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸರಣಿ ಉಳಿಸಿಕೊಳ್ಳಲು ನಿರ್ಣಾಯಕವೆನಿಸಿದ್ದ ಪಂದ್ಯದಲ್ಲಿ ಅಬ್ಬರಿಸಿದ ಡೇವಿಡ್ ಮಲನ್ ಹಾಗೂ ನಾಯಕ ಇಯೋನ್ ಮಾರ್ಗನ್ ಕಿವೀಸ್ ಬೌಲರ್ಗಳನ್ನು ಬೆಂಡೆತ್ತಿದರು. ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದ ಮಲನ್ ಒಟ್ಟಾರೆ 51 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 103 ರನ್ಗಳಿಸಿ ಔಟಾಗದೆ ಉಳಿದರು. ಮಾರ್ಗನ್ 41 ಎಸೆತಗಳಲ್ಲಿ ತಲಾ 7 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 91 ರನ್ಗಳಿಸಿ ದಾಖಲೆಯ 241 ರನ್ಗಳ ಬೃಹತ್ ಮೊತ್ತಕ್ಕೆ ಕಾರಣರಾದರು. ಆರಂಭಿಕ ಟಾಮ್ ಬ್ಯಾಂಟನ್ 31 ರನ್ಗಳಿಸಿದರು.
ಮಲನ್ ದಾಖಲೆ:
ಈ ಪಂದ್ಯದಲ್ಲಿ 48 ಎಸೆತಗಳಲ್ಲಿ ಶತಕ ದಾಖಲಿಸಿದ ಡೇವಿಡ್ ಮಲನ್ ಇಂಗ್ಲೆಂಡ್ ಪರ ವೇಗದ ಶತಕವೀರ ಎನಿಸಿಕೊಂಡರು. ಈ ಮೊದಲು 2014ರಲ್ಲಿ ಅಲೆಕ್ಸ್ ಹೇಲ್ಸ್ ಶ್ರೀಲಂಕಾ ವಿರುದ್ಧ 60 ಎಸೆತಗಳಲ್ಲಿ ಶತಕ ಸಿಡಿಸಿದ ದಾಖಲೆ ಹೊಂದಿದ್ದರು.