ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾಲ್ಗೊಳ್ಳುವ ಕ್ರಿಕೆಟರ್ಗಳಿಗೆ ಕೇವಲ ಹಣ ಮಾತ್ರ ಮುಖ್ಯವಾಗುವುದಿಲ್ಲ. ಬದಲಾಗಿ ಈ ಲೀಗ್ ವಿಶ್ವದೆಲ್ಲೆಡೆ ಪ್ರತಿಭೆಗಳ ಅನಾವರಣಕ್ಕೂ ಕಾರಣವಾಗುತ್ತಿದೆ. 13ನೇ ಆವೃತ್ತಿ ಕೋವಿಡ್ ಸಂಕಷ್ಟದಲ್ಲಿ ನಡೆದರೂ ಹೊಸ ಪ್ರತಿಭೆಗಳನ್ನು ಹುಟ್ಟುಹಾಕುವುದರಲ್ಲಿ ಮಾತ್ರ ಎಂದಿಗೂ ಹಿಂದೆ ಬಿದ್ದಿಲ್ಲ.
ಈಗಾಗಲೇ ಟೂರ್ನಿಯಿಂದ ಹೊರಬಿದ್ದರೂ 2020ರ ಐಪಿಎಲ್ನಲ್ಲಿ ಆರ್ಸಿಬಿಯಿಂದ ಪಡಿಕ್ಕಲ್, ರಾಜಸ್ಥಾನ್ ತಂಡದಿಂದ ತೆವಾಟಿಯಾ, ಕಾರ್ತಿಕ್ ತ್ಯಾಗಿ, ಕೆಕೆಆರ್ನಲ್ಲಿ ನಾಗರಕೋಟಿ, ಚೆನ್ನೈ ತಂಡದಲ್ಲಿ ರುತುರಾಜ್ ಗಾಯಕ್ವಾಡ್ , ಪಂಜಾಬ್ನಲ್ಲಿ ಬಿಷ್ಣೋಯ್ ಹಾಗೂ ಸನ್ರೈಸರ್ಸ್ ತಂಡದಲ್ಲಿ ನಟರಾಜನ್ ತಮ್ಮನ್ನು ತಾವು ಪ್ರದರ್ಶನದ ಮೂಲಕ ಗುರುತಿಸಿಕೊಳ್ಳಲು ಐಪಿಎಲ್ ನೆರವಾಗಿದೆ.
ಭಾನುವಾರ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡ ನಂತರ ಮಾತನಾಡಿದ ಡೇವಿಡ್ ವಾರ್ನರ್, ಟಿ. ನಟರಾಜನ್ ಈ ವರ್ಷದ ಐಪಿಎಲ್ ನೀಡಿದ ಕೊಡುಗೆ ಎಂದು ಬಣ್ಣಿಸಿದ್ದಾರೆ.
ಯಾರ್ಕರ್ನಲ್ಲಿ ರಬಾಡ, ಬುಮ್ರಾರನ್ನೇ ಮೀರಿಸಿದ ನಟರಾಜನ್ ತಂಡಕ್ಕೆ ಅಗತ್ಯವಾದಾಗ ವಿಕೆಟ್ ಪಡೆಯುವುದಲ್ಲೇ ನಿರ್ಣಾಯಕ ಹಂತದಲ್ಲಿ ಯಾರ್ಕರ್ಗಳ ಮೂಲಕ ರನ್ಗಳಿಗೆ ಕಡಿವಾಣ ಹಾಕಿದ್ದಾರೆ. ಅವರು 16 ಪಂದ್ಯಗಳಲ್ಲಿ 16 ವಿಕೆಟ್ ಪಡೆದು ಟೂರ್ನಿಯ ಶ್ರೇಷ್ಠ ವೇಗಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ಈ ಟೂರ್ನಿಯಲ್ಲಿ ನಟರಾಜನ್160ಕ್ಕೂ ಹೆಚ್ಚಿನ ಯಾರ್ಕರ್ ಎಸೆತಗಳನ್ನು ನಟರಾಜನ್ ಎಸೆದಿದ್ದಾರೆ.
ಭುವನೇಶ್ವರ್ ರಂತಹ ಅನುಭವಿ ವೇಗಿ ಇಲ್ಲದ ಕೊರತೆಯನ್ನು ನಟರಾಜನ್ ತೀರಿಸಿದ್ದಾರೆ. ಟೂರ್ನಿಯಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಯಾರ್ಕರ್ಗಳು ನಿಜಕ್ಕೂ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದೆ. ಐಪಿಎಲ್ ಈ ವರ್ಷದ ಆವೃತ್ತಿಯಲ್ಲಿ ಕೊಡುಗೆಯಾಗಿ ನೀಡಿರುವ ಬೌಲರ್ಗಳಲ್ಲಿ ಅವರು ಒಬ್ಬರು ಎಂದು ಕೊಂಡಾಡಿದ್ದಾರೆ.