ಸಿಡ್ನಿ:ಕೋವಿಡ್ 19 ಭೀತಿಯಿಂದ ಇಡೀ ವಿಶ್ವದಾದ್ಯತ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಕ್ರಿಕೆಟಿಗರು ತಮ್ಮ ಕುಟುಂಬದವರ ಜೊತೆ, ಇನ್ನು ಕೆಲವರು ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿ ಕ್ರಿಕೆಟ್ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಆದರೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಟಿಕ್ಟಾಕ್ನಲ್ಲಿ ತೆಲುಗು ಸಿನಿಮಾಗಳ ಡೈಲಾಗ್, ಸಾಂಗ್ಗೆ ಅಭಿನಯ ಮಾಡುವ ಮೂಲಕ ಕುಟುಂಬದವರ ಜೊತೆಗೆ ಎಂಜಾಯ್ ಮಾಡುವುದರ ಜೊತೆಗೆ ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಇತ್ತೀಚೆಗೆ ತೆಲುಗಿನ ಸ್ಟೈಲಿಸ್ ಸ್ಟಾರ್ ಖ್ಯಾತಿಯ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಂಲೋ' ಸಿನಿಮಾದ ‘ಬುಟ್ಟ ಬೊಮ್ಮ’ ಹಾಡಿಗೆ ವಾರ್ನರ್ ತಮ್ಮ ಪತ್ನಿ ಮಗಳೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. ಸ್ವತಃ ನಟ ಅಲ್ಲು ಅರ್ಜುನ್ ಅವರು ಡೇವಿಡ್ ವಾರ್ನರ್ ಅವರ ತೆಲುಗು ಪ್ರೀತಿ ನೋಡಿ ಟ್ವಿಟ್ಟರ್ನಲ್ಲಿ ಕಮೆಂಟ್ ಮಾಡಿದ್ದರು.
ಇದೀಗ ಸ್ಫೋಟಕ ಬ್ಯಾಟ್ಸ್ಮನ್ ವಾರ್ನರ್, ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಪೋಕಿರಿ ಸಿನಿಮಾದ ಡೈಲಾಗ್ ಹೇಳುವ ಟಿಕ್ಟಾಕ್ ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ವಾರ್ನರ್ ಬ್ಯಾಟ್ ಹಿಡಿದುಕೊಂಡು ‘ಒಕ್ಕ ಸಾರಿ ಕಮಿಟ್ ಆಯ್ತೆ ನಾ ಮಾತ ನೆನೆ ವಿನ್ನನು’ ಡೈಲಾಗ್ ಹೊಡದಿದ್ದಾರೆ. ಈ ಡೈಲಾಗ್ ಜೊತೆಗೆ, ಇದು ಯಾವ ಸಿನಿಮಾದ ಡೈಲಾಗ್ ಹೇಳಿ? ನಾನೂ ಎಲ್ಲವನ್ನು ಪ್ರಯತ್ನಿಸುತ್ತಿರುವೆ, ಸಹಾಯ ಮಾಡಿ, ಗುಡ್ ಲಕ್ ಎಂದು ಬರೆದುಕೊಂಡಿದ್ದಾರೆ.