ಬ್ರಿಸ್ಬೇನ್: ಶ್ರೀಲಂಕಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 9 ವಿಕೆಟ್ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ ಇನ್ನೂ ಒಂದು ಪಂದ್ಯವಿರುವಂತೆಯೇ ಟಿ20 ಸರಣಿ ಕೈವಶ ಮಾಡಿಕೊಂಡಿದೆ.
2020 ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ಫಿಂಚ್ ಪಡೆ ತವರಿನಲ್ಲಿ ನಡೆದ ಮೊದಲ ಸರಣಿಯಲ್ಲೇ ಭರ್ಜರಿ ಆರಂಭ ಪಡೆದಿದೆ.
ಬ್ರಿಸ್ಬೇನ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 19 ಓವರ್ಗಳಲ್ಲಿ 117 ರನ್ಗಳಿಗೆ ಆಲೌಟ್ ಆಯಿತು. ಕುಶಾಲ್ ಪೆರೆರಾ 27 ರನ್ ಹಾಗೂ ಗುಣತಿಲಕ 21 ರನ್ಗಳಿಸಿ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು.
ಆಸ್ಟ್ರೇಲಿಯಾ ಪರ ಬಿಲ್ಲಿ ಸ್ಟಾನ್ಲೇಕ್ , ಕಮ್ಮಿನ್ಸ್, ಅಶ್ಟನ್ ಅಗರ್ ಹಾಗೂ ಆ್ಯಡಂ ಜಂಪಾ ತಲಾ 2 ವಿಕೆಟ್ ಪಡೆದರು.
118 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್ ಗೋಲ್ಡನ್ ಡಕ್‌ಗೆ ಬಲಿಯಾದರು. ಆದರೆ ಡೇವಿಡ್ ವಾರ್ನರ್ ಹಾಗೂ ಸ್ಟಿವ್ ಸ್ಮಿತ್ ಭರ್ಜರಿ ಅರ್ಧಶತಕ ಸಿಡಿಸಿ ಕೇವಲ 13 ಓವರ್ಗಳಲ್ಲೇ ಗೆಲುವು ತಂದುಕೊಟ್ಟರು. ಡೇವಿಡ್ ವಾರ್ನರ್ 41 ಎಸೆತಗಳಲ್ಲಿ 9 ಬೌಂಡರಿ ಸಹಿತ 60 ರನ್ಗಳಿಸಿದರೆ, ಸ್ಮಿತ್ 56 ಎಸೆತಗಳಲ್ಲಿ 6 ಬೌಂಡರಿ ಸಹಿತ 53 ರನ್ಗಳಿಸಿದರು.
ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಾರ್ನರ್ ಈ ಪಂದ್ಯದಲ್ಲೂ ಅರ್ಧ ಶತಕ ದಾಖಲಿಸಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.