ನವದೆಹಲಿ:ಹೊಡಿಬಡಿ ಆಟಕ್ಕೆ ಹೆಸರಾಗಿರುವ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸುವುದೇ ಒಂದು ದೊಡ್ಡ ಸಾಹಸ. ಆದರೆ ಕೆಕೆಆರ್ ಮೆಂಟರ್ ಡೇವಿಡ್ ಹಸ್ಸಿ ಪ್ರಕಾರ ರಸೆಲ್ 3ನೇ ಕ್ರಮಾಂಕದಲ್ಲಿ ಆಡಿ 60 ಎಸೆತಗಳನ್ನೆದುರಿಸಿದರೆ ದಿಶತಕ ದಾಖಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಆರ್ಸಿಬಿ ತಂಡದಲ್ಲಿ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ 175 ರನ್ ದಾಖಲಿಸಿರುವುದು ಇಲ್ಲಿಯವರೆಗಿನ ಅತಿ ಹೆಚ್ಚು ವೈಯಕ್ತಿಕ ಗರಿಷ್ಠ ರನ್ ಆಗಿದೆ. ಆದರೆ ಕಳೆದ ವರ್ಷ ಅಬ್ಬರಿಸಿದ್ದ ರಸೆಲ್ ದ್ವಿಶತಕ ದಾಖಲಿಸಲು ಸಮರ್ಥರು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.
"ಆ್ಯಂಡ್ರೆ ರಸೆಲ್ ಅವರಿಗೆ ಮೂರನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಅವರು 60 ಎಸೆತಗಳನ್ನು ಎದುರಿಸಿದರೆ ಖಂಡಿತ ದ್ವಿಶತಕ ಸಿಡಿಸಲಿದ್ದಾರೆ. ಇದರಿಂದ ನಮ್ಮ ತಂಡಕ್ಕೆ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಕಳೆದ ವರ್ಷ ರಸೆಲ್ ಪಾಲಿಗೆ ಅದ್ಭುತವಾಗಿತ್ತು. ಅವರು ಎಲ್ಲಾ ತಂಡಗಳಿಗೂ ತಮ್ಮ ಬಿರುಸಿನ ಬ್ಯಾಟಿಂಗ್ನಿಂದ ಆಘಾತವನ್ನುಂಟು ಮಾಡಿದ್ದರು. ಅವರಷ್ಟೇ ಅಲ್ಲ, ಇಡೀ ತಂಡ ಉತ್ತಮ ಸಂಯೋಜನೆಯಿಂದ ಕೂಡಿದೆ. ಯಾರು ಬೇಕಾದರೂ ಯಾವ ಜವಾಬ್ದಾರಿಯನ್ನಾದರೂ ನಿರ್ವಹಿಸಲು ಸಮರ್ಥರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ರಸೆಲ್ 13 ಪಂದ್ಯಗಳಿಂದ 204.81 ಸ್ಟ್ರೈಕ್ರೇಟ್ನಲ್ಲಿ 510 ರನ್ ಸಿಡಿಸಿದ್ದರು. ಇದರಲ್ಲಿ 4 ಅರ್ಧಶತಕ ಸೇರಿತ್ತು.