ಢಾಕಾ: ಕೆರಿಬಿಯನ್ ತಂಡದ ಪ್ರವಾಸಕ್ಕೆ ಮುಂಚಿತವಾಗಿ ಆತಿಥೇಯ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಜಾರಿಗೆ ತಂದಿರುವ ಜೈವಿಕ ಭದ್ರತಾ ಯೋಜನೆಗಳು ಮತ್ತು ಆರೋಗ್ಯ ನಿಯಮಾವಳಿಗಳ ಬಗ್ಗೆ ಪರಿಶೀಲನೆ ನಡೆಸಲು ಎರಡು ಸದಸ್ಯರ ಕ್ರಿಕೆಟ್ ವೆಸ್ಟ್ ಇಂಡೀಸ್ ತಂಡವು ಮುಂದಿನ ವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದೆ.
ಯೋಜನೆಯ ಭಾಗವಾಗಿ, ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ) ನಿರ್ದೇಶಕ ಡಾ. ಅಕ್ಷಯ್ ಮನ್ಸಿಂಗ್ ಮತ್ತು ಮಂಡಳಿಯ ಭದ್ರತಾ ವ್ಯವಸ್ಥಾಪಕ ಪಾಲ್ ಸ್ಲೋವಿಲ್ ಅವರು ಮುಂದಿನ ವಾರ ಢಾಕಾ ಮತ್ತು ಚಿತ್ತಗಾಂಗ್‌ಗೆ ಭೇಟಿ ನೀಡಿ, ಬಿಸಿಬಿ ಜೈವಿಕ ಭದ್ರತಾ ಯೋಜನೆಗಳು ಮತ್ತು ಆರೋಗ್ಯ ಪ್ರೋಟೋಕಾಲ್‌ಗಳನ್ನು ಪರಿಶೀಲಿಸಲಿದ್ದಾರೆ.
ವೆಸ್ಟ್ ಇಂಡೀಸ್ ಮುಂದಿನ ವರ್ಷ ಜನವರಿಯಲ್ಲಿ ನಿಗದಿಯಂತೆ ಬಾಂಗ್ಲಾದೇಶ ಪ್ರವಾಸ ಮಾಡಲು ಉತ್ಸುಕವಾಗಿದೆ ಎಂದು ಸಿಡಬ್ಲ್ಯೂಐ ಅಧ್ಯಕ್ಷ ರಿಕಿ ಸ್ಕೆರಿಟ್ ಇತ್ತೀಚೆಗೆ ಹೇಳಿದ್ದರು.
"ಸಾಂಕ್ರಾಮಿಕ ರೋಗ ಪ್ರಾರಂಭದ ನಂತರ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿರುವ ಮೊದಲ ಅಂತಾರಾಷ್ಟ್ರೀಯ ತಂಡ ವಿಂಡೀಸ್ ಆಗಿದೆ" ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯೂಐ) ಸಿಇಒ ಜಾನಿ ಗ್ರೇವ್ ಉಲ್ಲೇಖಿಸಿದ್ದಾರೆ.
ಬಿಸಿಬಿಯ ಜೈವಿಕ ಸುರಕ್ಷಿತ ಯೋಜನೆಗಳು ಮತ್ತು ಪ್ರೋಟೋಕಾಲ್‌ಗಳನ್ನು ನಿರ್ಣಯಿಸಲು ಇಬ್ಬರು ಹೆಚ್ಚು ಅನುಭವಿ ವೃತ್ತಿಪರರನ್ನು ಕಳುಹಿಸುವ ಮೂಲಕ ಪೂರ್ವ - ಪ್ರವಾಸದ ವಿರಾಮ ನೀಡಲು ನಾವು ನಿರ್ಧರಿಸಿದ್ದೇವೆ. ನಮ್ಮ ವೈದ್ಯಕೀಯ ಮತ್ತು ಕಾರ್ಯಾಚರಣೆ ತಂಡಗಳು ಕಳೆದ ಕೆಲವು ವಾರಗಳಲ್ಲಿ ಹಲವಾರು ಸಭೆಗಳನ್ನು ನಡೆಸಿವೆ. ಅಷ್ಟೇ ಅಲ್ಲ ತಪಾಸಣೆ ತಂಡದಿಂದ ವರದಿಯನ್ನು ಸ್ವೀಕರಿಸಿದ ನಂತರ, ಮುಂದಿನ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡುವುದು ಸುರಕ್ಷಿತವೇ ಎಂಬ ಬಗ್ಗೆ ನಮ್ಮ ನಿರ್ದೇಶಕರ ಮಂಡಳಿಗೆ ಶಿಫಾರಸು ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.