ಸಿಡ್ನಿ:ವೇಗಿ ಪ್ಯಾಟ್ ಕಮ್ಮಿನ್ಸ್ ತಂತ್ರಗಾರಿಕೆಯಲ್ಲಿ ನಿಪುಣರು. ಅವರು ಆಸ್ಟ್ರೇಲಿಯಾ ತಂಡ ಮೂರು ಸ್ವರೂಪದ ತಂಡಗಳ ನಾಯಕತ್ವ ವಹಿಸಿಕೊಳ್ಳಲು ಸೂಕ್ತ ಸ್ಪರ್ಧಿ ಎಂದು ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಮಾಜಿ ನಾಯಕ ಸ್ಟೀವ್ ಸ್ಮಿತ್, ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಬಯಸುವುದಾದರೆ ಮತ್ತೆ ತಂಡದ ನಾಯಕತ್ವವನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ಮಂಡಳಿಯಲ್ಲೇ ಕೆಲವು ಗೊಂದಲಗಳಿವೆ. ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಸದ್ಯಕ್ಕೆ ನಾಯಕರನ್ನು ಬದಲಾಯಿಸುವ ಪ್ರಶ್ನೆಯಿಲ್ಲ ಎಂದಿದ್ದಾರೆ. ಆದರೆ 2015ರ ವಿಶ್ವಕಪ್ ಗೆದ್ದ ನಾಯಕ ಮೈಕಲ್ ಕ್ಲಾರ್ಕ್ ಟೆಸ್ಟ್ ತಂಡದ ಉಪನಾಯಕನಾಗಿರುವ ಪ್ಯಾಟ್ ಕಮ್ಮಿನ್ಸ್ರನ್ನು ನಾಯಕನನ್ನಾಗಿ ನೇಮಿಸಬಹುದು ಎಂಬ ಸಲಹೆ ಕೊಟ್ಟಿದ್ದಾರೆ.
"ಕಮ್ಮಿನ್ಸ್ ಅವರು ತಾವಾಗಿಯೇ ನಾನು ಮುಂದಿನ ನಾಯಕ ಎಂದು ಹೇಳದ ಕಾರಣ ಮತ್ತು ನಾನು ಸಿದ್ಧನಿದ್ದೇನೆ ಎಂದು ಹೇಳದಿರುವುದಕ್ಕೆ, ಅವರು ನಿಜವಾದ ನಾಯಕನಲ್ಲ ಎಂದು ಅರ್ಥೈಸುವುದು ತಪ್ಪು" ಎಂದು ಕ್ಲಾರ್ಕ್ ಹೇಳಿದ್ದಾರೆ..
"ಪ್ಯಾಟ್ ಕಮ್ಮಿನ್ಸ್ ಬಗ್ಗೆ ನಾನು ಏನು ಯೋಚಿಸುತ್ತಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಅವರು ಪ್ರಸ್ತುತ ಮೂರು ಮಾದರಿಯ ಕ್ರಿಕೆಟ್ ಆಡಲು ತಾವೂ ಫಿಟ್ ಮತ್ತು ಸಮರ್ಥರಾಗಿರುವುದಾಗಿ ತೋರಿಸಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಅಲ್ಲದೆ ಅವರಿಗೆ ಕೇವಲ 27 ವರ್ಷ ವಯಸ್ಸು, ಯುವ ಮತ್ತು ಅನುಭವಿ ಲೀಡರ್ ಆಗಿದ್ದಾರೆ. ಅವರಿಗೆ ಸ್ಮಿತ್ ಸೇರಿದಂತೆ ಹಲವಾರು ಅನುಭವಿ ಆಟಗಾರರು ಸುತ್ತ ಇರುವುದರಿಂದ ಸಹಾಯ ಮಾಡಲಿದ್ದಾರೆ" ಎಂದು ಕ್ಲಾರ್ಕ್ ತಿಳಿಸಿದ್ದಾರೆ.
ಅವರು ಮೂರು ಸ್ವರೂಪದ ತಂಡಗಳಿಗೂ ನಾಯಕನಾಗಲೂ ಇದು ಸೂಕ್ತ ಸಮಯ, ಖಂಡಿತ ಆತನಿಗೆ ಒಬ್ಬ ಉತ್ತಮ ಉಪನಾಯಕನ ಅಗತ್ಯವಿದೆ. ಟಿಮ್ ಪೇನ್ ನಿವೃತ್ತಿ ಹೊಂದಿದಾಗ, ಅಲೆಕ್ಸ್ ಕ್ಯಾರಿ ಅಂತಹವರನ್ನು ಕಮ್ಮಿನ್ಸ್ಗೆ ಉಪನಾಯಕನನ್ನಾಗಿ ನೇಮಿಸಬಹುದು, ಅವರು ಈಗಾಗಲೆ ಸೌತ್ ಆಸ್ಟ್ರೇಲಿಯಾ, ಬಿಬಿಎಲ್ ನಾಯಕನಾಗಿದ್ದಾರೆ. ಅವರು ಖಂಡಿತ ಉತ್ತಮ ಉಪನಾಯಕನಾಗಲಿದ್ದಾರೆ. ತಂಡದಲ್ಲಿ ಸ್ಟಾರ್ಕ್, ಸ್ಮಿತ್, ವಾರ್ನರ್, ನಥನ್ ಲಿಯಾನ್,ಹೆಜಲ್ವುಡ್ ಅಂತಹ ನಾಯಕತ್ವ ಅನುಭವವುಳ್ಳವರು ಕಮ್ಮಿನ್ಸ್ಗೆ ನೆರವಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.