ಚೆನ್ನೈ:2008ರ ಆವೃತ್ತಿಗಾಗಿ ತಂಡದ ಐಕಾನ್ ಪ್ಲೇಯರ್ ಆಗಿ ಧೋನಿ ಬದಲಿಗೆ ಸೆಹ್ವಾಗ್ರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಬಯಸಿತ್ತು. ಆದರೆ, ಡೆಲ್ಲಿ ಡ್ಯಾಶರ್ ತಮ್ಮ ತವರು ತಂಡ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ಪರ ಆಡುವುದಾಗಿ ತಿಳಿಸಿದ ನಂತರ ಸಿಎಸ್ಕೆ ಧೋನಿ ಕಡೆ ಮುಖ ಮಾಡಿತು ಎಂದು ಸಿಎಸ್ಕೆ ತಂಡದ ಮಾಜಿ ಕ್ರಿಕೆಟಿಗ ಸುಬ್ರಮಣಿಯಂ ಬದ್ರಿನಾಥ್ ಬಹಿರಂಗ ಪಡಿಸಿದ್ದಾರೆ.
ಸಿಎಸ್ಕೆ ಮ್ಯಾನೇಜ್ಮೆಂಟ್ 2008ರ ಆವೃತ್ತಿಗೂ ಮುನ್ನ ಸೆಹ್ವಾಗ್ರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಆದರೆ, ಸೆಹ್ವಾಗ್ ಸ್ವತಃ "ತಾವು ಡೆಲ್ಲಿಯಲ್ಲಿ ಬೆಳೆದಿದ್ದೇನೆ, ಜೊತೆಗೆ ಡೆಲ್ಲಿ ಡೇರ್ ಡೇವಿಲ್ಸ್ನೊಂದಿಗೆ ಉತ್ತಮ ಸಂಪರ್ಕವಿದೆ" ಎಂದು ಹೇಳಿ ತಮ್ಮ ತವರು ತಂಡದ ಪರ ಆಡುವುದಾಗಿ ತಿಳಿಸಿದ್ದರು ಎಂದು ಬದ್ರಿನಾಥ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ಸೆಹ್ವಾಗ್ ನಿರ್ಧಾರದ ನಂತರ, ಕೇವಲ 4 ವರ್ಷಕ್ಕಿಂತ ಕಡಿಮೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಅನುಭವವುಳ್ಳವರಾಗಿದ್ದ ಎಂಎಸ್ ಧೋನಿಯನ್ನು ಸಿಎಸ್ಕೆ ಖರೀದಿಸಲು ನಿರ್ಧಾರ ಮಾಡಿತ್ತು. ಅಷ್ಟರಲ್ಲಾಗಲೇ ಅವರು ಭಾರತಕ್ಕೆ ಚೊಚ್ಚಲ ಟಿ20 ವಿಶ್ವಕಪ್ ತಂದುಕೊಟ್ಟಿದ್ದರು.