ಶಾರ್ಜಾ: ಧೋನಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕ್ರಿಕೆಟ್ ಆಡಿಲ್ಲ. ಹಾಗಾಗಿ ಅವರು ತಮ್ಮ ಫಿನಿಷರ್ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು ಎಂದು ಹೇಳುವ ಮೂಲಕ ಸಿಎಸ್ಕೆ ಕೋಚ್ ಸ್ಟೀಪನ್ ಫ್ಲೆಮಿಂಗ್ ತಮ್ಮ ತಂಡದ ನಾಯಕನ ಬೆನ್ನಿಗೆ ನಿಂತಿದ್ದಾರೆ.
ಮಂಗಳವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ನಿಧಾನಗತಿ ಹಾಗೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಅವರನ್ನು ಕಳೆದ 12 ವರ್ಷಗಳಿಂದ ನೋಡಿಕೊಂಡು ಬರುತ್ತಿರುವ ಕಿವೀಸ್ ಮಾಜಿ ನಾಯಕ ಹಾಗೂ ಕೋಚ್ ಫ್ಲೆಮಿಂಗ್ ಧೋನಿಯ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿದ್ದಾರೆ.
"ನಾವು ಈ ಪ್ರಶ್ನೆಯನ್ನು ಪ್ರತೀ ವರ್ಷ ಕೇಳುತ್ತಲೇ ಇರುತ್ತೇವೆ. ಧೋನಿ 14ನೇ ಓವರ್‌ನಲ್ಲಿ ಮೈದಾನಕ್ಕೆ ಆಗಮಿಸಿದರು. ಅದು ಬಹುಮಟ್ಟಿಗೆ ಸೂಕ್ತ ಸಮಯವಾಗಿತ್ತು. ಅದರೆ ಅದಕ್ಕೆ ಅನುಗುಣವಾಗಿ ಮಾಡುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಸುದೀರ್ಘ ಕಾಲದಿಂದ ಕ್ರಿಕೆಟ್ ಆಡಿಲ್ಲ. ಹಾಗಾಗಿ ಅವರ ಮೇಲಿರುವ ನಿರೀಕ್ಷೆಗೆ ತಕ್ಕಂತೆ ಆಡಲು ಕೆಲವು ಸಮಯ ತೆಗೆದುಕೊಳ್ಳಬಹುದು.
ಆದರೆ, ಪಂದ್ಯದ ಕೊನೆಯ ಘಟ್ಟದಲ್ಲಿ ಅವರನ್ನು ನೀವು ನೋಡಿರಬಹುದು. ಅವರು ಅತ್ಯುತ್ತಮವಾಗಿ ಆಡಿದರು. ಫಾಫ್ ಡು ಪ್ಲೆಸಿಸ್ ತಮ್ಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಹಾಗಾಗಿ ನಾವು ಬ್ಯಾಟಿಂಗ್ ವಿಚಾರದಲ್ಲಿ ತುಂಬಾ ದೂರ ಹೋಗಿಲ್ಲ, ಜೊತೆಗೆ ಈ ವಿಚಾರವಾಗಿ ಖಂಡಿತವಾಗಿಯೂ ತಂಡದಲ್ಲಿ ಚಿಂತಿಸುವ ಸಂದರ್ಭ ಬಂದಿಲ್ಲ " ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್ 74, ಸ್ಟಿವ್ ಸ್ಮಿತ್ 69 ಹಾಗೂ ಜೋಫ್ರಾ ಆರ್ಚರ್ 27 ರನ್ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 216 ರನ್ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್ಕೆ 6 ವಿಕೆಟ್ ನಷ್ಟಕ್ಕೆ 200 ರನ್ಗಳಿಸಲಷ್ಟೆ ಶಕ್ತವಾಗಿ 16 ರನ್ಗಳ ಸೋಲು ಕಂಡಿತು. ಆದರೆ ಫ್ಲೆಸಿಸ್ 37 ಎಸೆತಗಳಲ್ಲಿ 72 ರನ್ಗಳಿಸಿ ಗೆಲುವಿಗಾಗಿ ನಡೆಸಿದ ಪ್ರಯತ್ನ ವಿಫಲವಾಯಿತು.