ದುಬೈ:ಗಾಯಗೊಂಡು ಐಪಿಎಲ್ನಿಂದ ಹೊರ ಬಿದ್ದಿರುವ ಸಿಎಸ್ಕೆ ಆಲ್ರೌಂಡರ್ ಡ್ವೇನ್ ಬ್ರಾವೋ ಇದೀಗ ವೆಸ್ಟ್ ಇಂಡೀಸ್ ತಂಡದಿಂದಲೂ ಹೊರಬಿದ್ದಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಮುಂದಿನ ತಿಂಗಳು ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ. ಗಾಯಾಳುವಾಗಿರುವ ಬ್ರಾವೋ 2-3 ವಾರಗಳ ವಿಶ್ರಾಂತಿ ಪಡೆಯಬೇಕಿರುವುದರಿಂದ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ಬ್ರಾವೋ ಬದಲು ಮಧ್ಯಮ ವೇಗಿ ರೊಮಾರಿಯೋ ಶೆಫರ್ಡ್ಗೆ ಅವಕಾಶ ನೀಡಿದೆ.
ತೊಡೆಸಂದು ಗಾಯಕ್ಕೀಡಾಗಿರುವ ಡ್ವೇನ್ ಬ್ರಾವೋ ಐಪಿಎಲ್ನಿಂದ ಹೊರ ಬಿದ್ದಿದ್ದರು. ಬ್ರಾವೋ ಅವರ ಗಾಯ ಶೀಘ್ರದಲ್ಲಿ ಗುಣಮುಖ ಆಗುವ ಸಾಧ್ಯತೆ ಕಡಿಮೆ ಇರುವುದರಿಂದ ನ್ಯೂಜಿಲ್ಯಾಂಡ್ ಟಿ-20 ಸರಣಿಯಿಂದ ಅವರನ್ನು ಹೊರಗಿಡಲಾಗಿದೆ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
" ನ್ಯೂಜಿಲ್ಯಾಂಡ್ ಪ್ರವಾಸವನ್ನು ಎದುರು ನೋಡುತ್ತಿದ್ದೆ. ಏಕೆಂದರೆ ನಾನು ಕೊನೆಯ ಬಾರಿ ವಿಂಡೀಸ್ ಜರ್ಸಿ ತೊಟ್ಟಿದ್ದು, ಕಳೆದ ಮಾರ್ಚ್ನಲ್ಲಿ. ಆದರೆ, ಗಾಯದ ಸಮಸ್ಯೆಯಿಂದ ನಾನು ಐಪಿಎಲ್ನಿಂದ ಹೊರ ಬಿದ್ದಿದ್ದೇನೆ. ವಿಂಡೀಸ್ ತಂಡದಲ್ಲಿ ಅವಕಾಶ ಪಡೆದಿರುವ ಶೆಫಿಗೆ ಅಭಿನಂದನೆಗಳು " ಎಂದು ಬ್ರಾವೋ ಹೇಳಿದ್ದಾರೆ.