ಆಂಟಿಗುವಾ:ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ಟೀಂ ಇಂಡಿಯಾ 419 ರನ್ಗಳ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕೆರಿಬಿಯನ್ನರು ಅಲ್ಪ ಮೊತ್ತಕ್ಕೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದಾರೆ.
ನಿನ್ನೆ ಒಂದು ಹಂತದಲ್ಲಿ 81 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಆಸರೆಯಾದ್ರು. ಉಭಯ ಆಟಗಾರರು ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕ ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 72 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡು 185ರನ್ ಗಳಿಸಿತ್ತು.
ಮತ್ತೆ ನಾಲ್ಕನೇ ದಿನದಾಟ ಆರಂಭಿಸಿದ ಕೊಹ್ಲಿ (51), ಅಜಿಂಕ್ಯ ರಹಾನೆ (102) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಹನುಮ ವಿಹಾರಿ (93) ರನ್ ಪೇರಿಸಿ ಉತ್ತಮ ಇನ್ನಿಂಗ್ಸ್ ಕಟ್ಟಿ, ಭಾರತ ತಂಡವನ್ನು 400ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಒಟ್ಟಾರೆ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಏಳು ವಿಕೆಟ್ ಕಳೆದುಕೊಂಡು 343 ಗಳಿಸಿತು. ಮೊದಲ ಇನ್ನಿಂಗ್ಸ್ನಲ್ಲಿ 75 ರನ್ ಮುನ್ನಡೆ ಸಾಧಿಸಿದ್ದ ಭಾರತ, ವೆಸ್ಟ್ ಇಂಡೀಸ್ಗೆ 419ರನ್ಗಳ ಗುರಿ ನೀಡಿದೆ.
ಗುರಿ ಬೆನ್ನಟ್ಟಿದ ವಿಂಡೀಸ್ ಆರಂಭದಲ್ಲೇ ಆಘಾತಕ್ಕೊಳಗಾಗಿದೆ. ಕ್ರೆಗ್ ಬ್ರಾಥ್ವೈಟ್ (1), ಜಾನ್ ಕಾಂಪ್ಬೆಲ್ (7), ಶಮರ್ ಬ್ರೂಕ್ಸ್ (0) ಹಾಗೂ ಶಿಮ್ರಾನ್ ಹೆಟ್ಮೆಯರ್ (1), ಡರೇನ್ ಬ್ರಾವೋ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದ್ದು, ವಿಂಡೀಸ್ ತಂಡ ಸೋಲಿನ ಸುಳಿಗೆ ಸಿಲುಕಿದೆ. ಭಾರತದ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಬೂಮ್ರಾ 5, ಇಶಾಂತ್ ಶರ್ಮಾ 2 ವಿಕೆಟ್ ಕಬಳಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 96.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 297ರನ್ ಗಳಿಸಿತ್ತು. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 222 ರನ್ಗಳು ಗಳಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಮಯಾಂಕ್ (16)ಚೇತೇಶ್ವರ ಪುಜಾರ (25) ಹಾಗೂ ರಾಹುಲ್ (38) ಆರಂಭಿಕರಾಗಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ 4 ವಿಕೆಟ್ ಕಬಳಿಸಿದ್ದಾರೆ.