ನವದೆಹಲಿ:ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸುದೀರ್ಘ ಹೇಳಿಕೆಯಿರುವ ಒಂದು ಪತ್ರದ ಮೂಲಕ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ.
'ಮಿಶ್ರ ಭಾವನೆಗಳೊಂದಿಗೆ ನಾನು ನಿವೃತ್ತಿಯ ಈ ಘೋಷಣೆಯನ್ನು ಮಾಡಲು ಸಮರ್ಥನಾಗಿದ್ದೇನೆ. ಭಾರತ ತಂಡ ಸೇರುವ ಮೊದಲು ನಾನು ಸಣ್ಣ ಪಟ್ಟಣದ ಗಲ್ಲಿ, ಬೀದಿಗಳಲ್ಲಿ ಕ್ರಿಕೆಟ್ ಆಡಿದ್ದೇನೆ. ನನಗೆ ತಿಳಿದಿರುವುದೇ ಕ್ರಿಕೆಟ್. ನಾನು ಇಲ್ಲಿಯವರೆಗೆ ಏನು ಮಾಡಿದ್ದೇನೋ ಅದು ಕ್ರಿಕೆಟ್ನಲ್ಲಿ ಮಾತ್ರ. ಕ್ರಿಕೆಟ್ ನನ್ನ ರಕ್ತನಾಳಗಳಲ್ಲಿ ಚಲಿಸುತ್ತಿದೆ.
ನಾನು ದೇವರಿಂದ ಮತ್ತು ಜನರಿಂದ ಸಾಕಷ್ಟು ಪ್ರೀತಿ, ಆಶೀರ್ವಾದ ಗಳಿಸಿದ್ದೇನೆ. ಅವರ ಆಶೀರ್ವಾದವನ್ನು ಗೌರವಿಸಿ ನನ್ನ ದೇಶ ಮತ್ತು ಈ ಪ್ರಯಾಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಆಟದ ಮೂಲಕ ಅದನ್ನು ಹಿಂದಿರುಗಿಸಿದ್ದೇನೆ.
ಇದೊಂದು ನಂಬಲಾಗದ ಪಯಣ. ಈ ಪಯಣದ ನನ್ನ ಏರಿಳಿತದ ಸಮಯದಲ್ಲಿ ಎಲ್ಲರೂ ಬೆಂಬಲಿಸಿದ್ದೀರಿ. ನನ್ನ ಹೆತ್ತವರು, ಪ್ರೀತಿಯ ಹೆಂಡತಿ, ಮಕ್ಕಳಾದ ಗ್ರೇಸಿಯಾ ಮತ್ತು ರಿಯೊ, ನನ್ನ ಸಹೋದರರು, ನನ್ನ ಸಹೋದರಿ ಮತ್ತು ಕುಟುಂಬದ ಎಲ್ಲಾ ಸದಸ್ಯರ ಬೆಂಬಲ ಮತ್ತು ತ್ಯಾಗವಿಲ್ಲದೆ ಈ ಪ್ರಯಾಣ ಸಾಧ್ಯವಾಗುತ್ತಿರಲ್ಲ. ಹಾಗಾಗಿ, ಇದೆಲ್ಲಾ ನಿಮ್ಮದೇ..
ನನಗೆ ಸದಾ ಸರಿಯಾದ ದಿಕ್ಕು ತೋರಿಸಿದ ತರಬೇತುದಾರರು, ಗಾಯಗೊಂಡಾಗ ಆರೈಕೆ ಮಾಡಿದ ವೈದ್ಯರು, ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಹಾಯ ಮಾಡಿದ ತರಬೇತುದಾರರು, ತಂಡದ ಸದಸ್ಯರಿಲ್ಲದೆ ನಾನು ಏನನ್ನೂ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ.
ಟೀಮ್ ಇಂಡಿಯಾ ಪರ ಆಡಿರುವ ರಾಹುಲ್ ಭಾಯ್ (ದ್ರಾವಿಡ್), ಅನಿಲ್ ಬಾಯ್ (ಕುಂಬ್ಳೆ), ಸಚಿನ್ ಪಾಜಿ,(ಸಚಿನ್ ತೆಂಡೂಲ್ಕರ್) ಚೀಕು (ಕೊಹ್ಲಿ), ವಿಶೇಷವಾಗಿ ಎಂ.ಎಸ್.ಧೋನಿ ಅವರಂತಹ ಉತ್ತಮ ವ್ಯಕ್ತಿತ್ವವುಳ್ಳವರ ನಾಯಕತ್ವದಲ್ಲಿ ಆಡಿರುವುದಕ್ಕೆ ಸಂತೋಷವಿದೆ. ಅವರನ್ನು ಸ್ನೇಹಿತನಾಗಿ, ಮಾರ್ಗದರ್ಶಕನಾಗಿ ಪಡೆದಿರುವುದಕ್ಕೆ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ.
ಉತ್ತರ ಪ್ರದೇಶದ ಒಬ್ಬ ಹುಡುಗ ಭಾರತದ ಪರ ಆಡಬೇಕೆಂಬ ದೊಡ್ಡ ಕನಸು ನನಸು ಮಾಡಿದ ಉತ್ತರ ಪ್ರದೇಶ ಕ್ರಿಕೆಟ್ ಬೋರ್ಡ್ ಹಾಗೂ ಭಾರತೀಯ ಕ್ರಿಕೆಟ್ ಸಂಸ್ಥೆಯ ಎಲ್ಲಾ ಬೆಂಬಲಕ್ಕೆ ಧನ್ಯವಾದಗಳು. ಕೊನೆಗೆ ನನ್ನನ್ನು ಇಷ್ಟು ವರ್ಷ ಪ್ರೀತಿಸಿದ ಮತ್ತು ನನ್ನನ್ನು ಮೆಚ್ಚಿ ಬೆಂಬಲಿಸಿದ ಅಭಿಮಾನಿಗಳ ಅಭಿಮಾನಕ್ಕೆ ನಾನು ಚಿರಋಣಿ ಜೈ ಹಿಂದ್'.