ಬ್ರಿಸ್ಬೇನ್:ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಯಿಸುವ ಅಂತಿಮ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಮಿಂಚಿರುವ ಮೊಹಮ್ಮದ್ ಸಿರಾಜ್ ತಾವು ಸಾಕಷ್ಟು ನೋವಿನ ನಡುವೆ ಈ ಸಾಧನೆ ಮಾಡಲು ತಮ್ಮ ತಾಯಿ ಮತ್ತು ಕುಟುಂಬದ ಪ್ರೋತ್ಸಾಹದಾಯಕ ಮಾತುಗಳೇ ಕಾರಣ ಎಂದು ತಿಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅಂತಹ ಘಟಾನುಘಟಿ ಬೌಲರ್ಗಳ ಅನುಪಸ್ಥಿತಿಯಲ್ಲಿ ಕೇವಲ ಮೂರನೇ ಪಂದ್ಯವನ್ನಾಡುತ್ತಿದ್ದರೂ ಬೌಲಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದ ವೇಗಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ಅಲ್ಲದೆ ಟೂರ್ನಿಯಲ್ಲಿ ಒಟ್ಟಾರೆ 13 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದ ಬೌಲರ್ಗಳಲ್ಲಿ 2ನೇ ಸ್ಥಾನದಲ್ಲಿದ್ದಾರೆ.
4ನೇ ದಿನದಾಟದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿರಾಜ್ ತಮ್ಮ ಈ ಪ್ರದರ್ಶನಕ್ಕೆ ತಾಯಿಯ ಜೊತೆ ಮಾತನಾಡಿದ್ದೆ ಕಾರಣ ಎಂದು ತಿಳಿಸಿದ್ದಾರೆ. "ತಂದೆಯನ್ನು ಕಳೆದುಕೊಂಡಿದ್ದು ನನಗೆ ತುಂಬಾ ಕಠಿಣವಾದ ಸಂದರ್ಭವಾಗಿತ್ತು. ಈ ಸಮಯದಲ್ಲಿ ನಾನು ಐದು ವಿಕೆಟ್ ಪಡೆಯಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿದ್ದೇನೆ. ನೋವಿನಲ್ಲಿದ್ದ ನಾನು ತಾಯಿಯ ಜೊತೆಗೆ ಮಾತನಾಡಿದ ನಂತರ ಮಾನಸಿಕವಾಗಿ ಬಲಿಷ್ಠನಾದೆ. ನಂತರ ನನ್ನ ತಂದೆಯ ಕನಸನ್ನು ನನಸು ಮಾಡುವುದರ ಕಡೆಗೆ ಗಮನ ನೀಡಿದೆ." ಎಂದು ಸಿರಾಜ್ ತಿಳಿಸಿದ್ದಾರೆ.