ಕೊಚ್ಚಿ: ಟೀಂ ಇಂಡಿಯಾದ ವೇಗಿ ಎಸ್.ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷದ ನಿಷೇಧಿತ ಅವಧಿ ಮುಗಿಯುವ ಹಂತ ತಲುಪಿದೆ. ಈ ಹೊತ್ತಲ್ಲಿ ಅವರಿಗೆ ರಣಜಿ ಕ್ರಿಕೆಟ್ ತಂಡದಲ್ಲಿ ಸ್ಥಾನ ನೀಡಲು ಕೇರಳ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಉರುಳು:
ಸ್ಪಾಟ್ ಫಿಕ್ಸಿಂಗ್ ಆರೋಪದಿಂದಾಗಿ ಶ್ರೀಶಾಂತ್ ಮತ್ತು ಅವರು ಪ್ರತಿನಿಧಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಆಟಗಾರರಾದ ಅಜಿತ್ ಚಾಂಡೇಲಾ ಮತ್ತು ಅಂಕಿತ್ ಚವಾಣ್ ಅವರನ್ನು ದೆಹಲಿ ಪೊಲೀಸರು 2013 ರ ಮೇ ತಿಂಗಳಲ್ಲಿ ಬಂಧಿಸಿದ್ದರು. ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೇಗಿ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಿತ್ತು.
ನ್ಯಾಯಾಲಯದಲ್ಲಿ ಹೋರಾಟ:
ಈ ಕುರಿತು ನ್ಯಾಯಾಲಯದಲ್ಲಿ ಶ್ರೀಶಾಂತ್ ಸಾಕಷ್ಟು ಹೋರಾಟ ನಡೆಸಿದ್ದರು. 2015 ರಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಅವರನ್ನು ಮುಕ್ತರನ್ನಾಗಿಸಿತ್ತು. ಆದರೆ ಬಿಸಿಸಿಐನಿಂದ ಹೇರಿದ್ದ ನಿಷೇಧ ಮುಂದುವರೆದಿತ್ತು.