ಒಂಟಾರಿಯೋ: ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ತಮ್ಮ ಆರ್ಭಟವನ್ನು ಮುಂದುವರಿಸಿದ್ದು ಕೇವಲ 6 ರನ್ಗಳಿಂದ 24ನೇ ಟಿ20 ಶತಕವನ್ನು ತಪ್ಪಿಸಿಕೊಂಡಿದ್ದಾರೆ. ಆದರೆ ಪಾಕಿಸ್ತಾನದ ಬೌಲರ್ ಶದಾಬ್ ಖಾನ್ ಅವರ ಒಂದೇ ಓವರ್ನಲ್ಲಿ 32 ರನ್ಗಳಿಸಿ ಅಬ್ಬರಿಸಿದ್ದಾರೆ.
ಇಂದು ನಡೆದ ಗ್ಲೋಬಲ್ ಟಿ20 ಕೆನಡಾ ಲೀಗ್ನಲ್ಲಿ ವಾಂಕೋವರ್ ನೈಟ್ಸ್ ತಂಡದ ಹಿಂದಿನ ಪಂದ್ಯದಲ್ಲಿ 122 ರನ್ ಚಚ್ಚಿದ್ದ ಗೇಲ್ ಇಂದಿನ ಎಡ್ಮಂಟನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್ ಸಹಿತ 94 ರನ್ಗಳಿಸಿ ಔಟಾದರು. ಗೇಲ್ ಕೇವಲ 6 ರನ್ಗಳಿಂದ ಟಿ20 ಕ್ರಿಕೆಟ್ನಲ್ಲಿ ತಮ್ಮ 24ನೇ ಶತಕ ತಪ್ಪಿಸಿಕೊಂಡರು. ಆದರೂ ತಮ್ಮ ನೇತೃತ್ವದ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಶತಕ ಮಿಸ್ ಆದರೂ ಅವರ ಬ್ಯಾಟಿಂಗ್ ವೈಭವ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು. ಪಾಕಿಸ್ತಾನ ಸ್ಪಿನ್ ಬೌಲರ್ ಶದಾಬ್ ಖಾನ್ರ ಒಂದೇ ಓವರ್ನಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು. 3 ಮತ್ತು 4ನೇ ಎಸೆತಗಳಲ್ಲಿ ಬೌಂಡರಿ ಹಾಗೂ ಉಳಿದೆಲ್ಲಾ ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಾವೂ ಯೂನಿವರ್ಸಲ್ ಬಾಸ್ ಎಂಬುದನ್ನು ಕ್ರಿಕೆಟ್ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟರು.
ಮೊದಲು ಬ್ಯಾಟಿಂಗ್ ನಡೆಸಿದ್ದ ರಾಯಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ಗಳಿಸಿತ್ತು. ಆಲ್ರೌಂಡರ್ ಬೆನ್ಕಟಿಂಗ್ 41 ಎಸೆತಗಳಲ್ಲಿ 3 ಬೌಂಡರಿ 7 ಸಿಕ್ಸರ್ ಸಹಿತ 72 ರನ್ಗಳಿಸಿದ್ದರು. ಮತ್ತೊಬ್ಬ ಆಲ್ರೌಂಡರ್ ಮೊಹಮ್ಮದ್ ನವಾಜ್ 27 ಎಸೆತಗಳಲ್ಲಿ 1 ಬೌಂಡರಿ 3 ಸಿಕ್ಸರ್ ಸಹಿತ 40 ರನ್ಗಳಿಸಿದ್ದರು.
166 ರನ್ಗಳ ಗುರಿಯನ್ನು ಗೇಲ್ ಪಡೆ 16,3 ಓವರ್ಗಳಲ್ಲಿ ತಲುಪಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಗೇಲ್ 94 ರನ್ಗಳಿಸಿದರೆ,ಶೋಯಬ್ ಮಲಿಕ್ ಔಟಾಗದೆ 17 ಎಸೆತಗಳಲ್ಲಿ 34 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.