ಹೈದರಾಬಾದ್: ಟೀಂ ಇಂಡಿಯಾದ ರಾಹುಲ್ ಡ್ರಾವಿಡ್ ಎಂದು ಖ್ಯಾತಿ ಗಳಿಸಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 33ನೇ ವಸಂತಕ್ಕೆ ಕಾಲಿಟ್ಟಿದ್ದು, ಹಲವಾರು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಭಾರತದ ಪರ 81 ಟೆಸ್ಟ್ ಪಂದ್ಯಗಳನ್ನಾಡಿರುವ ಚೇತೇಶ್ವರ್ ಪೂಜಾರ 6,111 ರನ್ಗಳಿಸಿದ್ದಾರೆ. ಇವರು 18 ಶತಕ ಹಾಗೂ 3 ದ್ವಿಶಕ ಸಿಡಿಸಿ ಭಾರತ ತಂಡದಲ್ಲಿ ಖಾಯಂ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾರೆ.
ಅಕ್ಟೋಬರ್ 9ರ 2010ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಡೆಬ್ಯು ಮಾಡಿದ್ದ ಚೇತೇಶ್ವರ್ ಪೂಜಾರ, ಎರಡನೇ ಇನ್ನಿಂಗ್ಸ್ನಲ್ಲಿ 72ರನ್ ಗಳಿಸಿ ಗಮನ ಸೆಳೆದಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬಲರ್ಹವಾದ ನಂಬರ್ ಥ್ರೀ ಬ್ಯಾಟ್ಸ್‌ಮನ್ ಆಗಿರುವ ಪೂಜಾರ ಭಾರತ ತಂಡ ಹಲವು ಸರಣಿ ಗೆಲ್ಲಲು ಪ್ರಮುಖ ಕಾರಣರಾಗಿದ್ದಾರೆ.
2018ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ, ಬರೋಬ್ಬರಿ 500 ರನ್ಗಳಿಕೆ ಮಾಡಿ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನ 2 -1 ಅಂತರದಲ್ಲಿ ಗೆದ್ದುಕೊಳ್ಳುವುದರ ಜತೆಗೆ 71 ವರ್ಷದ ನಂತರ ಕಾಂಗರೂ ನಾಡಲ್ಲಿ ಈ ದಾಖಲೆ ಬರೆಯುವಂತೆ ಮಾಡಿದ್ದರು.
ಅಲ್ಲದೇ ಇತ್ತಿಚೆಗೆ ಮುಕ್ತಾಯವಾದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ತಾಳ್ಮೆಯ ಆಟವಾಡಿ ಆಸೀಸ್ ಬೌಲರ್ಗಳನ್ನು ಕಾಡಿದ ಪೂಜಾರ ಮತ್ತೊಂದು ಸ್ಮರಣೀಯ ಗೆಲುವಿನಲ್ಲಿ ತಮ್ಮದೇ ಕಾಣಿಕೆ ನೀಡಿದ್ರು. ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 6,000 ರನ್ ಪೂರ್ಣಗೊಳಿಸಿದ್ದು, ಭಾರತದ ಪರ ಈ ಸಾಧನೆ ಮಾಡಿದ 11ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪೂಜಾರ ಅವರ ಜನ್ಮದಿನಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಹಲವು ಮಂದಿ ಶುಭ ಕೋರಿದ್ದಾರೆ.