ಮುಂಬೈ: ಭಾರತ ಟೆಸ್ಟ್ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಖಾಯಂ ಆಟಗಾರನಾಗಿರುವ ಚೇತೇಶ್ವರ್ ಪೂಜಾರ 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸ್ಟ್ರೇಲಿಯನ್ ಬೌಲರ್ಗಳ ದಾಳಿಯನ್ನು ಸಮರ್ಥವಾಗಿ ದಂಡಿಸಿ, 3 ಶತಕ ಸಿಡಿಸಿ ಮಿಂಚಿದ್ದರು. 1200ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ್ದು ಅವರ ಟೆಸ್ಟ್ ಕ್ರಿಕೆಟ್ನ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಆದರೆ, 2020ರ ಪ್ರವಾಸದಲ್ಲಿ ಚೇತೇಶ್ವರ್ ಪೂಜಾರ ಅವರಿಂದ ರನ್ ಸರಾಗವಾಗಿ ಬರಲಿಲ್ಲ. ಜೋಶ್ ಹೆಜಲ್ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ರಂತಹ ಮಾರಕ ವೇಗಿಗಳ ಎದುರು ತಡೆಗೋಡೆಯಾಗಿ ನಿಂತು ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಾ ಐತಿಹಾಸಿಕ ಸರಣಿ ಗೆಲ್ಲಲು ನೆರವಾದರು.
ಅದರಲ್ಲೂ ಬ್ರಿಸ್ಬೇನ್ನ ಗಬ್ಬಾದಲ್ಲಿ ಅವರು ತೋರಿದ ಆಟ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಯುವ ಆಟಗಾರರು ಮತ್ತು ಪೂಜಾರರ ತಾಳ್ಮೆಯ ಆಟದ ಫಲ, ಭಾರತ ಸತತ ಎರಡನೇ ಬಾರಿಗೆ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿತ್ತು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲವಾದರೂ, ಅವರ ಉಪಸ್ಥಿತಿ ತಂಡದಲ್ಲಿ ಆಶಾ ಭಾವವನ್ನು ನೀಡಿದೆ. ಇನ್ನು, ಇವರ ಆಟವನ್ನು ದಿಗ್ಗಜ ರಾಹುಲ್ ದ್ರಾವಿಡ್ಗೆ ಹೋಲಿಸುವುದು ಪೂಜಾರಗೆ ಸಂದಿರುವ ಗೌರವ ಎನ್ನಬಹುದು.
ಇದೀಗ ಇಂಗ್ಲೆಂಡ್ ಸರಣಿ ಮುಗಿಸಿ ಬಂದಿರುವ ಪೂಜಾರ ಐಪಿಎಲ್ನಲ್ಲಿ 7 ವರ್ಷಗಳ ನಂತರ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾರರನ್ನು ಎಂಸ್ ಧೋನಿ ನಾಯಕತ್ವದ ಸಿಎಸ್‌ಕೆ ತಂಡ 50 ಲಕ್ಷ ರೂ.ಗಳಿಗೆ ಖರೀದಿಸಿದೆ. ಬಿಳಿ ಬಣ್ಣದ ಜರ್ಸಿಯಲ್ಲಿ ಮಾತ್ರ ಕಾಣಸಿಗುತ್ತಿದ್ದ ಪೂಜಾರ ದೀರ್ಘಸಮಯದ ನಂತರ ಬಣ್ಣದ ಜರ್ಸಿ ತೊಡಲಿದ್ದಾರೆ. ತಮ್ಮ ಐಪಿಎಲ್ ಕಮ್ಬ್ಯಾಕ್ ಸೇರಿ ಕೆಲ ಆಸಕ್ತಿಕರ ವಿಚಾರಗಳನ್ನು ಈಟಿವಿ ಭಾರತದ ಜೊತೆ ಪೂಜಾರ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ನೀವು ಆಡಿದ್ದೀರಾ. ಈ ವೇಳೆ ಬಯೋ ಬಬಲ್ನಲ್ಲಿ ಜೀವನ ಹೇಗಿತ್ತು?
ಬಯೋ ಬಬಲ್ನಲ್ಲಿರುವುದು ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುವ ಮೊದಲು ಇದ್ದಷ್ಟು ಸುಲಭವಲ್ಲ. ಇದು ತುಂಬಾ ಕಠಿಣ. ಆದರೆ, ವೃತ್ತಿಪರ ಕ್ರಿಕೆಟಿಗನಾಗಿರುವುದರಿಂದ ಮಾನಸಿಕವಾಗಿ ಕಠಿಣರಾಗಿರಬೇಕು. ಯಾವುದೇ ಸವಾಲುಗಳಿಗೆ ಸಿದ್ಧರಾಗಿರಬೇಕು. ಅದಕ್ಕಾಗಿ ನೀವು ಒಂದು ಮಾರ್ಗ ಕಂಡು ಹಿಡಿದುಕೊಂಡು ಬಬಲ್ ಜೀವನಕ್ಕೆ ಒಗ್ಗಿಕೊಳ್ಳಬೇಕು.
ತುಂಬಾ ವರ್ಷಗಳ ನಂತರ ಐಪಿಎಲ್ನಲ್ಲಿ ಆಡುವ ಅವಕಾಶ ಸಿಕ್ಕಾಗ ನಿಮಗುಂಟಾದ ಭಾವನೆ ಹೇಗಿತ್ತು?
ಐಪಿಎಲ್‌ನ ಭಾಗವಾಗುವುದು ನಾನು ಯಾವಾಗಲೂ ನೆನೆಪಿಸಿಕೊಳ್ಳುವ ವಿಷಯ. ಕಳೆದ ಕೆಲವು ವರ್ಷಗಳಿಂದ ನಾನು ಅದರ ಭಾಗವಾಗಿರದಿರುವುದು ದುರದೃಷ್ಟಕರ. ಆದರೆ, ಐಪಿಎಲ್‌ನ ಭಾಗವಾಗಿರುವುದನ್ನು ಸದಾ ಆನಂದಿಸುತ್ತೇನೆ. ಈ ನಿರ್ದಿಷ್ಟ ಸ್ವರೂಪದಲ್ಲಿ ಆಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ. ಇದೀಗ ನಾನು ಸಿಎಸ್‌ಕೆ ಭಾಗವಾಗಿದ್ದೇನೆ. ನನ್ನ ಮೇಲೆ ನಂಬಿಕೆಯನ್ನು ತೋರಿಸಿದ ಮತ್ತು ತಂಡದ ಭಾಗವಾಗಲು ಅವಕಾಶವನ್ನು ನೀಡಿದ ಸಿಎಸ್‌ಕೆ ಪ್ರಾಂಚೈಸಿಗೆ ಧನ್ಯವಾದ ಹೇಳಲು ನಾನು ಬಯಸುತ್ತೇನೆ.