ಸಿಡ್ನಿ: ಶ್ರೀಲಂಕಾ ಮಹಿಳಾ ತಂಡದ ನಾಯಕ ಚಾಮರಿ ಅಟಪಟ್ಟು ಆಸ್ಟ್ರೇಲಿಯ ವನಿತೆಯರ ವಿರುದ್ಧ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಹೌದು ಎರಡು ದಿನಗಳ ಹಿಂದೆಯಷ್ಟೇ ನೇಪಾಳ ತಂಡದ ನಾಯಕ ಪರಾಸ್ ಖಡ್ಕ ಟಿ -20 ಕ್ರಿಕೆಟ್ನಲ್ಲಿ ಸಿಂಗಾಪುರ್ ವಿರುದ್ಧ ಚೇಸಿಂಗ್ ವೇಳೆ ಶತಕ ಬಾರಿಸಿದ ಮೊದಲ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಲಂಕಾ ತಂಡದ ನಾಯಕ ಚಾಮರಿ ಅಟಪಟ್ಟು ಚೇಸಿಂಗ್ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ಮಹಿಳಾ ತಂಡದ ನಾಯಕಿ ಎಂಬ ವಿಶ್ವದಾಖಲೆಗೆ ಪಾತ್ರರಾದರು.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಆರಂಭಿಕ ಆಟಗಾರ್ತಿ ಬೆತ್ ಮೋನಿ (113) ಅವರ ಶತಕದ ನೆರವಿನಿಂದ 217 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಮೋನಿ 61 ಎಸೆತಗಳಲ್ಲಿ 20 ಬೌಂಡರಿ ಬಾರಿಸಿದ್ದರು.
218 ರನ್ಗಳ ಬೃಹತ್ ಮೊತ್ತ ಬೆನ್ನಟ್ಟಿದ ಲಂಕಾ 20 ಓವರ್ಗಳಲ್ಲಿ 176 ರನ್ಗಳನ್ನಷ್ಟೇ ಗಳಿಸಲು ಶಕ್ತವಾಗಿ 41 ರನ್ಗಳ ಸೋಲನಭವಿಸಿತು. ಆದರೆ, ಲಂಕಾ ನಾಯಕಿ ಚಾಮರಿ ಅಟಪಟ್ಟು 66 ಎಸೆತಗಳಲ್ಲಿ 12 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ 116 ರನ್ಗಳಿಸಿ ಏಕಾಂಗಿ ಹೋರಾಟ ನಡೆಸಿದರು.
ಚಾಮರಿ ಅಟಪಟ್ಟು ವಿಶ್ವದಾಖಲೆಯ ಶತಕದ ಹೊರತಾಗಿಯೂ ಲಂಕಾ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ಗಳಿಗೆ ಸೀಮಿತವಾಯಿತು.