ಸಿಡ್ನಿ: ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಇಂದು ನಡೆದ 2ನೇ ಟಿ20 ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಭಾರತದ ಪರ ಚುಟುಕು ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ಜೊತೆಗೆ ಹಂಚಿಕೊಂಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಚಹಾಲ್ 51 ರನ್ ಬಿಟ್ಟು ದುಬಾರಿಯಾದರು. ಆದರೂ ಸ್ಟಿವ್ ಸ್ಮಿತ್ರನ್ನು ಔಟ್ ಮಾಡುವ ಮೂಲಕ ತಮ್ಮ 59ನೇ ವಿಕೆಟ್ ಪಡೆದರು. ಈ ಮೂಲಕ ವೇಗಿ ಬುಮ್ರಾ ದಾಖಲೆಯನ್ನು ಸರಿಗಟ್ಟಿದರು. ಚಹಾಲ್ 44 ಪಂದ್ಯದಲ್ಲಿ 59 ವಿಕೆಟ್ ಪಡೆದಿದ್ದರೆ, ಬುಮ್ರಾ 49 ಪಂದ್ಯಗಳಿದ ಇಷ್ಟೇ ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ: ಅಬ್ಬರಿಸಿದ ಪಾಂಡ್ಯ, ಧವನ್: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದು ಸೇಡು ತೀರಿಸಿಕೊಂಡ ಕೊಹ್ಲಿ ಪಡೆ
ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದಿರುವ ದಾಖಲೆ ಶ್ರೀಲಂಕಾದ ಲಸಿತಾ ಮಾಲಿಂಗ ಅವರ ಹೆಸರಿನಲ್ಲಿದೆ. ಮಾಲಿಂಗ 84 ಪಂದ್ಯಗಳಿಂದ 107 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದಿರುವ ವಿಶ್ವದ ಏಕೈಕ ಬೌಲರ್ ಎಂಬ ದಾಖಲೆ ಅವರ ಹೆಸರಿನಲ್ಲಿದೆ. 2ನೇ ಸ್ಥಾನದಲ್ಲಿ ಪಾಕಿಸ್ತಾನದ ಅಫ್ರಿದಿ(98), 3ನೇ ಸ್ಥಾನದಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್(92), 4ನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್(89) 5ನೇ ಸ್ಥಾನದಲ್ಲಿರುವ ಪಾಕಿಸ್ತಾನದ ಉಮರ್ ಗುಲ್, ಸಯೀದ್ ಅಜ್ಮಲ್ ತಲಾ 85 ವಿಕೆಟ್ ಪಡೆದಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ನೀಡಿದ 195 ರನ್ಗಳ ಬೃಹತ್ ಗುರಿಯನ್ನು ಇನ್ನೂ 2 ಎಸೆತಗಳುಳಿದಿರುವಂತೆ ತಲುಪಿ ಟಿ20 ಸರಣಿಯನ್ನು 2-0ಯಲ್ಲಿ ಮುನ್ನಡೆ ಸಾಧಿಸಿತು.