ನವದೆಹಲಿ :ಮುಂದಿನ ಮೂರು ವರ್ಷಗಳ ಕಾಲ ತಾವೂ ತಮ್ಮ ದೇಹವನ್ನು ಕ್ರಿಕೆಟ್ಗಾಗಿ ದಂಡಿಸುತ್ತೇನೆ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪಂದ್ಯ ಗೆಲ್ಲಿಸುವ ಪ್ರದರ್ಶನ ತೋರಲು ಬಯಸುತ್ತೇನೆ ಎಂದು ಭಾರತ ತಂಡದ ವೇಗಿ ಉಮೇಶ್ ಯಾದವ್ ತಿಳಿಸಿದ್ದಾರೆ.
ಭಾರತ ತಂಡದ ಪರ ಉಮೇಶ್ ಯಾದವ್ 48 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅವರು ಭಾರತದ ಬೆಸ್ಟ್ ಬೌಲಿಂಗ್ ವಿಭಾಗ ಎಂದೇ ಖ್ಯಾತವಾಗಿರುವ ಇಶಾಂತ್, ಬುಮ್ರಾ ಮತ್ತು ಮೊಹಮ್ಮದ್ ಶಮಿ ಇರುವ ಗುಂಪಿನಲ್ಲಿ ಕಾಣಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಉತ್ತಮ ಪ್ರದರ್ಶನ ತೋರುತ್ತಿದ್ದರೂ, ಅವರು ತಂಡದ 11ರ ಬಳಗದ ಮೊದಲ ಆಯ್ಕೆಯಾಗಿಲ್ಲ. ಅವರು ಯುವ ಬೌಲರ್ ಸಿರಾಜ್ರಿಂದ ಸ್ಪರ್ಧೆ ಎದುರಿಸುತ್ತಿದ್ದಾರೆ.
ಆದರೂ ತಾವೂ ತಂಡಕ್ಕಾಗಿ ಇನ್ನು ಮೂರು ವರ್ಷಗಳ ಕಾಲ ಆಡಬಲ್ಲೆ ಎಂದು ತಿಳಿಸಿದ್ದಾರೆ. "ನನಗೆ 33 ವರ್ಷ ಮತ್ತು ಇನ್ನು ಎರಡು ಅಥವಾ ಮೂರು ವರ್ಷಗಳ ಕಾಲ ನನ್ನ ದೇಹವನ್ನು ದಂಡಿಸಬಲ್ಲೆ. ಈ ವೇಳೆ ಕೆಲವು ಯುವ ಆಟಗಾರರು ತಂಡದಲ್ಲಿ ಕಾಣಿಸಿಕೊಳ್ಳಬಹುದು, ಇದು ಆರೋಗ್ಯಕರ ಸ್ಪರ್ಧೆಯಾಗಿರುತ್ತದೆ ಮತ್ತು ಕೊನೆಗೆ ಇದರಿಂದ ತಂಡಕ್ಕೆ ಅನುಕೂಲವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಯಾದವ್ ತಿಳಿಸಿದ್ದಾರೆ.
"4 ಅಥವಾ 5 ಟೆಸ್ಟ್ಗಳ ಪ್ರವಾಸದಲ್ಲಿ ತಂಡದಲ್ಲಿ ನೀವು 4 ರಿಂದ 5 ಬೌಲರ್ಗಳನ್ನು ಹೊಂದಿದ್ದರೆ, ಪ್ರತಿಯೊಬ್ಬರು ಎರಡು ಪಂದ್ಯಗಳನ್ನಾಡಿಸುವ ಮೂಲಕ, ಅವರ ಕೆಲದ ಹೊರೆ ಕಡಿಮೆ ಮಾಡಬಹುದು. ಇದರಿಂದ ವೇಗದ ಬೌಲರ್ಗಳು ದೀರ್ಘಕಾಲದವರೆಗೆ ಆಡಲು ನೆರವಾಗಲಿದೆ " ಉಮೇಶ್ ಹೇಳಿದ್ದಾರೆ.