ಬ್ರಿಸ್ಬೇನ್: ಕೋವಿಡ್ ನಡುವೆಯೂ ಆಸ್ಟ್ರೇಲಿಯಾಗೆ ಬಂದು ಐತಿಹಾಸಿಕ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದಕ್ಕೆ ಭಾರತ ತಂಡ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಕ್ರಿಕೆಟ್ ಆಸ್ಟ್ರೇಲಿಯಾ ಧನ್ಯವಾದ ಅರ್ಪಿಸಿದೆ.
ಮಂಗಳವಾರ ಗಬ್ಬಾದಲ್ಲಿ 3 ವಿಕೆಟ್ಗಳ ಜಯ ಸಾಧಿಸುವ ಮೂಲಕ ರಹಾನೆ ನೇತೃತ್ವದ 2ನೇ ದರ್ಜೆ ಭಾರತ ತಂಡ ಸಂಪೂರ್ಣ ಫಿಟ್ ಇರುವ ಆಸ್ಟ್ರೇಲಿಯಾ ತಂಡವನ್ನು 2-1ರಲ್ಲಿ ಮಣಿಸಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಸರಣಿ ಮುಕ್ತಾಯದ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೆ ಮತ್ತು ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಕಡೆಯಿಂದ ಸರಣಿ ಗೆದ್ದ ಭಾರತ ತಂಡಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಟೀಂ ಇಂಡಿಯಾದ ಈ ಅಭೂತಪೂರ್ವ ಜಯ ಮುಂದಿನ ತಲೆಮಾರಿನವರೆಗೂ ನೆನಪಿನಲ್ಲಿರುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆಯೂ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಪಾತ್ರ ಮಹತ್ವದ್ದಾಗಿತ್ತು ಎಂದು ಸಿಎ ಪತ್ರದಲ್ಲಿ ತಿಳಿಸಿದೆ.