ಸಿಡ್ನಿ: ಆಸ್ಟ್ರೇಲಿಯಾ ಎ ವಿರುದ್ಧ ಶುಕ್ರವಾರ ನಡೆದ ಗುಲಾಬಿ ಚೆಂಡು ಅಭ್ಯಾಸ ಪಂದ್ಯದ ಆರಂಭಿಕ ದಿನದಂದು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೊದಲ ಅರ್ಧಶತಕ ಗಳಿಸಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 57 ಎಸೆತಗಳನ್ನು ಎದುರಿಸಿದ ಬುಮ್ರಾ 6 ಬೌಂಡರಿ ಮತ್ತು ಎರಡು ಸಿಕ್ಸರ್ಗಳ ನೆರವಿನಿಂದ 55 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ 48.3 ಓವರ್‌ಗಳಲ್ಲಿ 194 ರನ್ಗಳಿಗೆ ಆಲ್ ಔಟ್ ಆಗಿದೆ.
ಆರಂಭಿಕ ಆಟಗಾರ ಪೃಥ್ವಿ ಶಾ 40 ಮತ್ತು ಶುಬ್ಮನ್ ಗಿಲ್ 43 ರನ್ ಗಳಿಸಿದ್ದು ಬಿಟ್ಟರೆ ಟೀಂ ಇಂಡಿಯಾದ ಯಾವುದೇ ಆಟಗಾರರು ಉತ್ತಮವಾಗಿ ಬ್ಯಾಟ್ ಬೀಸಲಿಲ್ಲ. ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಟೀಂ ಇಂಡಿಯಾಕ್ಕೆ ಆಸರೆಯಾದ ಬುಮ್ರಾ, ವೇಗಿ ಮೊಹಮ್ಮದ್ ಸಿರಾಜ್ ಜೊತೆಗೂಡಿ 10ನೇ ವಿಕೆಟ್‌ಗೆ 71 ರನ್‌ಗಳ ಅಮೂಲ್ಯವಾದ ಜೊತೆಯಾಟ ಆಡಿದ್ರು.
ಸಂಕಷ್ಟದಲ್ಲಿ ಆಸೀಸ್:
ಟೀಂ ಇಂಡಿಯಾ ಆಲ್ಔಟ್ ಆದ ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾ ಕೂಡ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಟೀಂ ಇಂಡಿಯಾ ವೇಗಿಗಳ ದಾಳಿ ಎದುರಿಸಲಾಗದೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದಾರೆ. ಸದ್ಯ ಆಸೀಸ್ ತಂಡ 9 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. ಭಾರತದ ಪರ ನವದೀಪ್ ಸೈನಿ 3, ಮೊಹಮ್ಮದ್ ಶಮಿ 3, ಬುಮ್ರಾ 2 ಮತ್ತು ಸಿರಾಜ್ 1 ವಿಕೆಟ್ ಪಡೆದಿದ್ದಾರೆ.