ಹೈದರಾಬಾದ್:ವೈಯಕ್ತಿಕ ಕಾರಣಗಳಿಂದಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಇದೀಗ ಏಕದಿನ ಸರಣಿಯಿಂದಲೂ ಹೊರಗೆ ಉಳಿಯಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇಂಗ್ಲೆಂಡ್ ವಿರುದ್ಧದ ಐದು ಟಿ-20 ಪಂದ್ಯಗಳಿಂದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾಗೆ ಈಗಾಗಲೇ ವಿಶ್ರಾಂತಿ ನೀಡಲಾಗಿದೆ. ಸದ್ಯ ಟೆಸ್ಟ್ ಸರಣಿಯಲ್ಲಿ ಅವರು ಭಾಗಿಯಾಗಿದ್ದರು. ಆದರೆ ವೈಯಕ್ತಿಕ ಕಾರಣ ನೀಡಿರುವ ಅವರು, ಗುರುವಾರದಿಂದ ಆರಂಭಗೊಳ್ಳಲಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುತ್ತಿರುವುದಾಗಿ ಬಿಸಿಸಿಐಗೆ ಪತ್ರ ಬರೆದಿದ್ದರು. ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಅವರಿಗೆ ಅನುಮತಿ ನೀಡಿದೆ. ಈ ಬೆನ್ನಲ್ಲೇ ಏಕದಿನ ಸರಣಿಯಲ್ಲೂ ಪಾಲ್ಗೊಳ್ಳದೆ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ದೊರೆತಿದೆ.