ಮುಂಬೈ :ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ತಮ್ಮ ಹಳೆಯ ದಿನಗಳನ್ನು ನೆನೆಪಿಸುವ ಫೋಟೋಗಳನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಈ ಫೋಟೋಗಳಲ್ಲಿ ವೆಸ್ಟ್ ಇಂಡೀಸ್ನ ದಂತಕತೆ ಸರ್ ವಿವಿಯನ್ ರಿಚರ್ಡ್ಸ್ ಹಾಗೂ ಬೌಲಿಂಗ್ ಐಕಾನ್ ಮಾಲ್ಕಮ್ ಮಾರ್ಷಲ್ ಅವರೊಂದಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶಾಸ್ತ್ರಿ ಭಾರತ ಕಂಡ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರು. ಇವರು ಭಾರತದ ಪರ 80 ಟೆಸ್ಟ್ ಹಾಗೂ 151 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 3830 ಮತ್ತು ಏಕದಿನ ಕ್ರಿಕೆಟ್ನಲ್ಲಿ 3108 ರನ್ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 151 ವಿಕೆಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ 129 ವಿಕೆಟ್ ಪಡೆದಿದ್ದಾರೆ. ಸದ್ಯ ಭಾರತ ತಂಡದ ಕೋಚ್ ಆಗಿ ಭಾರತ ವಿಶ್ವದಲ್ಲೇ ಬಲಿಷ್ಠ ತಂಡವಾಗಲು ನೆರವಾಗಿರುವ ಅವರು ಸಾಮಾಜಿಕ ಜಾಲಾತಾಣದಲ್ಲೂ ಸಕ್ರಿಯರಾಗಿದ್ದಾರೆ.
ಶನಿವಾರ ತಮ್ಮ ಟ್ವಿಟರ್ನಲ್ಲಿ ಬ್ರದರ್ಸ್ ಇನ್ ಆರ್ಮ್," ನಾನಾಡಿರುವ ವಿರೋಧಿ ತಂಡದ ಅತ್ಯುತ್ತಮ ಆಟಗಾರರು, ಗೌರವಯುತರಾದ ಮಾಲ್ಕಮ್ ಡೆನ್ಜಿಲ್ ಮಾರ್ಷಲ್ ಮತ್ತು ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್ ಅವರೊಂದಿಗೆ" ಎಂದು ಶಾಸ್ತ್ರಿ ಎರಡು ಪ್ರತ್ಯೇಕ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್ ಕಂಡ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ರಿಚರ್ಡ್ಸ್, ವಿಂಡೀಸ್ ಪರ 121 ಟೆಸ್ಟ್ ಹಾಗೂ 187 ಏಕದಿನ ಪಂದ್ಯಗಳನ್ನಾಡಿದ್ದಾರೆ. ಅವರು 24 ಶತಕಗಳೊಂದಿಗೆ 8540 ರನ್ ಹಾಗೂ 11 ಶತಕ 45 ಅರ್ಧಶತಕಗಳೊಂದಿಗೆ 6721 ರನ್ಗಳಿಸಿದ್ದಾರೆ. ಶಾಸ್ತ್ರಿ ಟ್ವೀಟ್ಗೆ ಪ್ರತಿಕ್ರಿಯಿಸಿರುವ ರಿಚರ್ಡ್ಸ್, ಈ ಹಳೆಯ ನೆನಪುಗಳನ್ನು ಮರುಕಳಿಸಿದ್ದಕ್ಕೆ ಧನ್ಯವಾದ ಗೆಳೆಯ ಎಂದು ರವಿಶಾಸ್ತ್ರಿಗೆ ಅಭಿನಂದನೆ ತಿಳಿಸಿದ್ದಾರೆ.
ಶಾಸ್ತ್ರಿ ಶೇರ್ ಮಾಡಿಕೊಂಡಿರುವ ಮತ್ತೊಬ್ಬ ವಿಂಡೀಸ್ ಲೆಜೆಂಡ್ ಮಾರ್ಷಲ್ 81 ಟೆಸ್ಟ್ಗಳಿಂದ 376 ಮತ್ತು 151 ಏಕದಿನ ಪಂದ್ಯಗಳಿಂದ 157 ವಿಕೆಟ್ ಪಡೆದಿದ್ದಾರೆ. ಕೊರೊನಾ ಲಾಕ್ಡೌನ್ನಿಂದ ಎಲ್ಲಾ ಕ್ರೀಡಾ ಚಟುವಟಿಕೆಗಳು ನಿಷೇಧಗೊಂಡಿವೆ. ವಿಶ್ವದಾದ್ಯಂತ ಈ ಸಾಂಕ್ರಾಮಿಕ ರೋಗಕ್ಕೆಸುಮಾರು 2.3 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ.