ಮ್ಯಾಂಚೆಸ್ಟರ್:ಮೂರನೇ ಟೆಸ್ಟ್ನಲ್ಲಿ ಬ್ರಾಡ್ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ತಂಡವನ್ನು 197ಕ್ಕೆ ಆಲೌಟ್ ಮಾಡುವ ಮೂಲಕ 182 ರನ್ಗಳ ಮುನ್ನಡೆ ಸಾಧಿಸಿದೆ.
ಎರಡನೇ ದಿನ ಇಂಗ್ಲೆಂಡ್ 369 ರನ್ಗಳಿಸಿ ಆಲೌಟ್ ಆಗಿತ್ತು. ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ವಿಂಡೀಸ್ 137ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಇಂದು ಮತ್ತೆ ಬ್ಯಾಟಿಂಗ್ ಮುಂದುವರಿಸಿದ ಹೋಲ್ಡರ್ ಪಡೆ ನಿನ್ನೆಯ ಮೊತ್ತಕ್ಕೆ 60 ರನ್ ಸೇರಿಸಿ ಸರ್ವಪತನ ಕಂಡಿತು. ಇಂದಿನ ಎಲ್ಲಾ ವಿಕೆಟ್ಗಳು ಸ್ಟುವರ್ಟ್ ಬ್ರಾಡ್ ಪಾಲಾದವು.
ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ 46 ರನ್ಗಳಿಸಿದ್ದೆ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ವಿಕೆಟ್ ಕೀಪರ್ ಡೋರಿಚ್ 37 ಜಾನ್ ಕ್ಯಾಂಪ್ಬೆಲ್ 32 ರನ್ಗಳಿಸಿದರು.
ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 31ಕ್ಕೆ 6, ಜೇಮ್ಸ್ ಆ್ಯಂಡರ್ಸನ್ 28ಕ್ಕೆ 2, ಜೋಫ್ರಾ ಆರ್ಚರ್ ಹಾಗೂ ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದರು.
ಇಂದು ಮೂರನೇ ದಿನವಾಗಿದ್ದು, 60ಕ್ಕೂ ಹೆಚ್ಚಿನ ಓವರ್ಗಳ ಆಟ ಬಾಕಿಯಿದೆ. ಇಂಗ್ಲೆಂಡ್ ಈಗಾಗಲೆ 172 ರನ್ಗಳ ಮುನ್ನಡೆ ಪಡೆದುಕೊಂಡಿರುವುದರಿಂದ ಇಂದು ಮತ್ತು ನಾಳೆ ಮೊದಲ ಸೆಸನ್ವರೆಗೆ ಬ್ಯಾಟಿಂಗ್ ನಡೆಸಿದರೆ ಬೃಹತ್ ಟಾರ್ಗೆಟ್ ನೀಡಬಹುದು. ಒಟ್ಟಿನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಡ್ರಾ ಸಾಧಿಸುವುದು ಕೂಡ ಕಷ್ಟವಾಗಿದೆ.