ನವದೆಹಲಿ:ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗಿಂತ ಅಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಉತ್ತಮ ಬ್ಯಾಟ್ಸ್ಮನ್ ಎಂದು ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ.
ಜಿಂಬಾಬ್ವೆಯ ಮಾಜಿ ವೇಗಿಎಂಬಾಗ್ವ ಜೊತೆ ಇನ್ಸ್ಟಾಗ್ರಾಮ್ ಸಂದರ್ಶನದಲ್ಲಿ ಮಾತನಾಡಿರುವ ಬ್ರೆಟ್ ಲೀ ಅವರು, ಕೊಹ್ಲಿ-ಸ್ಮಿತ್ ಇಬ್ಬರಲ್ಲಿ ಯಾರನ್ನು ನೀವು ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಬ್ರೆಟ್ ಲೀ ತಮ್ಮ ದೇಶದ ಸ್ಟಿವ್ ಸ್ಮಿತ್ರನ್ನು ಆಯ್ಕೆ ಮಾಡಿದ್ದಾರೆ.
ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ತುಂಬಾ ಕಠಿಣ. ಇಬ್ಬರೂ ತಮ್ಮದೇ ಆದ ಕೌಶಲಗಳನ್ನು ಹೊಂದಿದ್ದಾರೆ. ಬೌಲಿಂಗ್ ಪಾಯಿಂಟ್ನಲ್ಲಿ ನೋಡುವುದಾದರೆ, ನಾನು ಇಬ್ಬರಲ್ಲಿ ನ್ಯೂನ್ಯತೆಗಳನ್ನು ನೋಡಲು ಪ್ರಯತ್ನಿಸುತ್ತೇನೆ. ಆದರೆ, ಈ ಇಬ್ಬರು ಬ್ಯಾಟ್ಸ್ಮನ್ಗಳು ಉತ್ತಮ ಸಾಮರ್ಥ್ಯ ಹೊಂದಿದ್ದಾರೆ.
‘ಕೊಹ್ಲಿ ತಂತ್ರಗಾರಿಕೆಯಲ್ಲಿ ಉತ್ತಮರಾಗಿದ್ದಾರೆ. ಅವರು V ಮೂಲಕ ಅದ್ಭುತವಾಗಿ ಹೊಡೆಯುತ್ತಾರೆ. ಅದನ್ನು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಹೊಡೆಯುತ್ತಿದ್ದರು. ಅದನ್ನು ಆಡುವುದು ತುಂಬಾ ಕಷ್ಟ. ಇನ್ನು ಕೊಹ್ಲಿ ಶ್ರೇಷ್ಠ ನಾಯಕರೂ ಕೂಡ ಹೌದು. ನನ್ನ ಪ್ರಕಾರ ಅವರು ಐಪಿಎಲ್ ಗೆಲ್ಲಲು ಇಷ್ಟ ಪಡುತ್ತಾರೆ’ ಎಂದು ಲೀ ಹೇಳಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಮಿತ್ 2018ರಲ್ಲಿ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಆದರೂ 2019ರ ಆ್ಯಶಸ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
‘ಸ್ಟಿವ್ ಸ್ಮಿತ್ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಯಾತನೆ ಅನುಭವಿಸಿದ್ದಾರೆ. ಆದರೂ ಕಳೆದ 12 ತಿಂಗಳುಗಳಲ್ಲಿ ತಮ್ಮ ಆಟದ ಮೂಲಕವೇ ದಿನದಿಂದ ದಿನಕ್ಕೆ ತಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸಿಕೊಂಡಿದ್ದಾರೆ. ಕೆಲವೊಮ್ಮೆ ಗೊಂದಲಕ್ಕೊಳಗಾದರೂ ಅವರು ತಾಳ್ಮೆಯನ್ನು ತಮ್ಮ ಸಂಗಾತಿಯಂತೆ ಭಾವಿಸುತ್ತಾರೆ’.
‘ಪ್ರಸ್ತುತ ನಾನು ಕೊಹ್ಲಿಗಿಂತ ಸ್ಮಿತ್ರನ್ನೇ ಆಯ್ಕೆ ಮಾಡುತ್ತೇನೆ. ಏಕೆಂದರೆ ಅವರು ಹಲವು ಸವಾಲುಗಳನ್ನು ಜಯಿಸಿ ಬಂದಿದ್ದಾರೆ. ಇಬ್ಬರು ಅದ್ಭುತ ಆಟಗಾರರು, ಆದರೆ ಸ್ಮಿತ್ ಡಾನ್ ಬ್ರಾಡ್ಮನ್ನಂತೆಯೇ ಉತ್ತಮರಾಗಿದ್ದಾರೆ. ಸ್ಮಿತ್ ಆಟ ನೋಡಿದರೆ ಬ್ರಾಡ್ಮನ್ ಆಟ ನೋಡಿದಂತಾಗುತ್ತದೆ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ’ ಎಂದು ಲೀ ತಿಳಿಸಿದ್ದಾರೆ.
ಪ್ರಸ್ತುತ ಸ್ಮಿತ್ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಮೊದಲ ಸ್ಥಾನದಲ್ಲಿದ್ದರೆ, ಸ್ಮಿತ್ ಟಾಪ್ 10ರಲ್ಲೂ ಕಾಣಿಸಿಕೊಂಡಿಲ್ಲ.