ಮೆಲ್ಬೋರ್ನ್: 2ನೇ ಟೆಸ್ಟ್ನಲ್ಲಿ ಶತಕ ಸಿಡಿಸಿ ಭಾರತದ ಗೆಲುವಿಗೆ ನೆರವಾದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ ಮುಲ್ಲಾಘ್ ಪದಕ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮೊದಲ ಬಾರಿಗೆ ಪರಿಚಯಿಸಿದೆ.
ಜಾನಿ ಮುಲ್ಲಾಘ್ ಯಾರು?
1868ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾದಿಂದ ಅಂತಾರಾಷ್ಟ್ರೀಯ ಪ್ರವಾಸ ಕೈಗೊಂಡ ಮೊದಲ ಕ್ರೀಡಾ ತಂಡದ ಮೂಲ ಆಟಗಾರ ಈ ಜಾನಿ ಮುಲ್ಲಾಘ್. ಈತ ಆ ಕಾಲದ ಅತ್ಯುತ್ತಮ ಆಟಗಾರನಾಗಿದ್ದು, ಇವರ ಹೆಸರನ್ನು ಆಸ್ಟ್ರೇಲಿಯನ್ ಕ್ರಿಕಟ್ ಹಾಲ್ ಆಫ್ ಫೇಮ್ಗೆ ಸೇರಿಸಲಾಗಿದೆ.
ಮುಲ್ಲಾಘ್ ಈ ಪ್ರವಾಸದಲ್ಲಿ 245 ವಿಕೆಟ್ ಮತ್ತು 23.65 ಸರಾಸರಿಯಲ್ಲಿ 1698 ರನ್ ಗಳಿಸಿದ್ದರು. ಅಲ್ಲದೆ ಪ್ರವಾಸದಲ್ಲಿ ನಡೆದಿದ್ದ 47 ಪಂದ್ಯಗಳಲ್ಲಿ 45ರಲ್ಲಿ ಪ್ರತಿನಿಧಿಸಿದ್ದರೆಂದು ತಿಳಿದು ಬಂದಿದೆ.
ಉನಾರ್ರಿಮಿನ್ ಎಂಬಲ್ಲಿ ಜನಿಸಿದ ಮುಲ್ಲಾಘ್ 1866ರಲ್ಲಿ ನಡೆದಿದ್ದ ಕ್ರಿಕೆಟ್ನ 3ನೇ ಹಾಗೂ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಅಬೊರಿಜಿನಲ್ ಮತ್ತು ಟಿ.ಡಬ್ಲ್ಯೂ.ವಿಲ್ಸ್ ಇಲೆವೆನ್ ನಡುವಿನ ಪಂದ್ಯದಲ್ಲಿ ಬೃಹತ್ ಜನಸಂದಣಿಯ ಮುಂದೆ ಆಡಿದ್ದರು. ಇವರ ಸ್ಮರಣಾರ್ತ ಕ್ರಿಕೆಟ್ ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ನ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ 'ಮುಲ್ಲಾಘ್ ಪದಕ'ವನ್ನು ಪರಿಚಯಿಸಿದೆ.
ಈ ಪದಕವನ್ನು 1868ರಲ್ಲಿ ಆಂದಿನ ತಂಡ ತೊಟ್ಟಿದ ಬೆಲ್ಟ್ನ ಬಕಲ್ನಲ್ಲಿ ತಯಾರಿಸಲಾಗಿದೆ. 1866ರ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮುಲ್ಲಾಘ್ ಅವರು ಎಂಸಿಜಿಯಲ್ಲಿ ಆಡಿದ್ದರಿಂದ ಅವರ ಹೆಸರನ್ನ ಈ ಪದಕಕ್ಕೆ ನಾಮಕರಣ ಮಾಡಲು ಕಾರಣ ಎಂದು ತಿಳಿದು ಬಂದಿದೆ.
ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಅಜಿಂಕ್ಯ ರಹಾನೆ 112 ರನ್ ಗಳಿಸಿ ಮೊದಲ ಇನ್ನಿಂಗ್ಸ್ನಲ್ಲಿ 131 ರನ್ಗಳ ಇನ್ನಿಂಗ್ಸ್ ಮುನ್ನಡೆಗೆ ಕಾರಣರಾಗಿದ್ದರು. ಹಾಗಾಗಿ ಮೊದಲ ಮುಲ್ಲಾಘ್ ಪದಕವನ್ನು ರಹಾನೆ ಪಡೆದಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.