ಮೆಲ್ಬೋರ್ನ್:ಬಿಗ್ ಬ್ಯಾಶ್ ಕ್ರಿಕೆಟ್ ಲೀಗ್ನಲ್ಲಿ ಪಾಕಿಸ್ತಾನದ ಬೌಲರ್ ಒಬ್ಬ ವಿಚಿತ್ರವಾಗಿ ಸಂಭ್ರಮಾಚರಣೆ ಮಾಡಿದ್ದು, ಇದೀಗ ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತರೇಹವಾರಿ ಕಮೆಂಟ್ಗಳಿಗೆ ಆಹಾರವಸ್ತುವಾಗಿದೆ.
ಪಾಕಿಸ್ತಾನದ ಕ್ರಿಕೆಟರ್ ಹ್ಯಾರಿಸ್ ರೌಫ್ ಮಾಡಿರುವ ವಿಚಿತ್ರ ಸಂಭ್ರಮಾಚರಣೆ ಇದೀಗ ಸಿಕ್ಕಾಪಟ್ಟೆ ಟೀಕೆಗೆ ಒಳಗಾಗಿದೆ. ಇನ್ನು ಪಾಕ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡದ ಈ ಬೌಲರ್ ಆಡಿರುವ ಮೂರು ಪಂದ್ಯಗಳಿಂದ 10 ವಿಕೆಟ್ ಪಡೆದುಕೊಂಡಿದ್ದಾರೆ.
ಮೆಲ್ಬೋರ್ನ್ ಸ್ಟಾರ್ ಪರ ಮೈದಾನಕ್ಕಿಳಿದಿರುವ ಈ ಪ್ಲೇಯರ್ ಸಿಡ್ನಿ ತಂಡರ್ಸ್ ಬ್ಯಾಟ್ಸ್ಮನ್ ವಿಕೆಟ್ ಪಡೆದುಕೊಳ್ಳುತ್ತಿದ್ದಂತೆ ಕೈಯಿಂದ‘ಗಂಟಲು ಕತ್ತರಿಸುವ' ರೀತಿಯಲ್ಲಿ ಸಂಭ್ರಮಿಸಿದ್ದು, ಇದರ ವಿಡಿಯೋ ಇದೀಗ ವೈರಲ್ ಆಗಿದೆ.
ಅಭಿಮಾನಿಗಳ ಹೃದಯ ಗೆದ್ದಿದ್ದ ಬೌಲರ್
ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಹೋಬರ್ಟ್ ಹ್ಯುರಿಕೇನ್ ವಿರುದ್ಧದ ಪಂದ್ಯದಲ್ಲಿ ಕೇವಲ 27 ರನ್ಗಳಿಗೆ ಐದು ವಿಕೆಟ್ ಪಡೆದುಕೊಂಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಈ ವೇಳೆ, ಭಾರತೀಯ ಮೂಲದ ಭದ್ರತಾ ಸಿಬ್ಬಂದಿಗೆ ಮ್ಯಾಚ್ ವಿನ್ ಬಾಲ್ ಉಡುಗೊರೆಯಾಗಿ ನೀಡುವ ಮೂಲಕ ಈ ಬೌಲರ್ ಅಭಿಮಾನಿಗಳ ಹೃದಯ ಗೆದಿದ್ದರು.