ದುಬೈ: ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಐಸಿಸಿ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ನೀಡಿದ ಪ್ರದರ್ಶನಕ್ಕಾಗಿ ಮಾರ್ಚ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯಗಳಿಂದ 4.65 ಎಕಾನಮಿಯಲ್ಲಿ 6 ವಿಕೆಟ್ ಪಡೆದಿದ್ದರು. ಟಿ-20ಯಲ್ಲಿ 6.38 ಎಕಾನಮಿಯಲ್ಲಿ 4 ವಿಕೆಟ್ ಪಡೆದಿದ್ದರು.
"ದೀರ್ಘಾವಧಿಯ ನಂತರ ಭಾರತ ತಂಡದ ಪರ ಮತ್ತೆ ಆಡುತ್ತಿರುವುದಕ್ಕೆ ನಾನು ತುಂಬಾ ಖುಷಿಯಾಗಿದ್ದೇನೆ. ನಾನು ತಂಡದಿಂದ ಹೊರಗಿದ್ದ ವೇಳೆ ನನ್ನ ಫಿಟ್ನೆಸ್ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಗಮನ ನೀಡಿದ್ದೆ. ದೇಶಕ್ಕಾಗಿ ಮತ್ತೆ ವಿಕೆಟ್ ಪಡೆಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ" ಎಂದು ಭುವನೇಶ್ವರ್ ಕುಮಾರ್ ಐಸಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಲಿಜೆಲ್ ಲೀ ಭಾರತದ ರಾಜೇಶ್ವರಿ ಗಾಯಕ್ವಾಡ್ ಮತ್ತು ಪೂನಮ್ ರಾವುತ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿದ್ದಾರೆ. ಲೀ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಒಂದು ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದರು.
ಇದನ್ನು ಓದಿ:ಟಿ20 ವಿಶ್ವಕಪ್ನಲ್ಲಿ ಈತ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ: ಲಕ್ಷ್ಮಣ್