ಬೆಂಗಳೂರು:ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿದ್ದ ಭಾರತದ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ಗೆ ಲಂಡನ್ನಲ್ಲಿ ಯಶಸ್ವಿ ಸರ್ಜರಿ ಮುಗಿದಿದ್ದು, ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿನ ಎನ್ಸಿಎಗೆ ಸೇರಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿವೇಳೆ ಭುವನೇಶ್ವರ್ ಕುಮಾರ್ಗೆ ಸ್ಪೋರ್ಟ್ಸ್ ಹರ್ನಿಯಾ ಇರುವುದು ಪತ್ತೆಯಾಗಿತ್ತು. ನಂತರ ಏಕದಿನ ಸರಣಿಯಿಂದ ಹೊರಬಿದ್ದಿದ್ದರು. ಇದೀಗ ಭಾರತದ ಪಿಸಿಯೋಥೆರಫಿಸ್ಟ್ ಯೋಗೇಶ್ ಕುಮಾರ್ ಅವರ ಜೊತೆ ಲಂಡನ್ಗೆ ತೆರಳಿ ಜನವರಿ 11 ರಂದು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಭುವಿ ಭಾರತಕ್ಕೆ ಹಿಂತಿರುಗಿದ ಮೇಲೆ ತಮ್ಮ ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಗೆ ತೆರಳಲಿದ್ದಾರೆ. ಈ ವೇಳೆ, ಅವರು ಫಿಟ್ ಎನಿಸಿದರೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
2018ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ತೋರಿದ್ದ ಅವರು ಅದೇ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ನಂತರ ಚೇತರಿಸಿಕೊಂಡು ವಿಂಡೀಸ್ ವಿರುದ್ಧ ಟಿ20 ಸರಣಿಗೆ ಆಯ್ಕೆಯಾದರಾದರು ಸ್ಪೋರ್ಟ್ಸ್ ಹರ್ನಿಯಕ್ಕೆ ತುತ್ತಾಗಿದ್ದರು.