ದುಬೈ:ಭಾರತದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ ಮಾರ್ಚ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಎಲ್ಲ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ಅತ್ಯುತ್ತಮ ಪ್ರದರ್ಶನಗಳನ್ನು ಗುರುತಿಸಲು ಐಸಿಸಿ ಗುರುವಾರ ನಾಮನಿರ್ದೇಶಿತರನ್ನು ಪ್ರಕಟಿಸಿದೆ. ಅದರಲ್ಲಿ ಭುವನೇಶ್ವರ್ ಕುಮಾರ್ ಜೊತೆಗೆ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಇದ್ದಾರೆ.
ಮಹಿಳೆಯರ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕ್ವಾಡ್ , ದಕ್ಷಿಣ ಆಫ್ರಿಕಾದಲಿಜೆಲ್ ಲೀ ಮತ್ತು ಭಾರತದ ಪುನಮ್ ರಾವುತ್ ನಾಮ ನಿರ್ದೇಶನಗೊಂಡಿದ್ದಾರೆ.
ಭುವನೇಶ್ವರ್ ಕುಮಾರ್ ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 3 ಪಂದ್ಯಗಳಿಂದ 4.65 ಎಕಾನಮಿಯಲ್ಲಿ 6 ವಿಕೆಟ್ ಪಡೆದಿದ್ದರು. ಟಿ-20ಯಲ್ಲಿ 6.38 ಎಕಾನಮಿಯಲ್ಲಿ 4 ವಿಕೆಟ್ ಪಡೆದಿದ್ದರು. ರಶೀದ್ ಖಾನ್ ಜಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಪಡೆದರು ಅಫ್ಘಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟಿ-20ಯಲ್ಲಿ 3 ಪಂದ್ಯಗಳಿಂದ 6 ವಿಕೆಟ್ ಪಡೆದಿದ್ದರು.