ದುಬೈ: ಸನ್ರೈಸರ್ಸ್ ತಂಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಸೊಂಟದ ನೋವಿಗೆ ಒಳಗಾಗಿದ್ದು, 2020ರ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಭುವನೇಶ್ವರ್ ಕುಮಾರ್ ಸೊಂಟದ ಉಳುಕಿಗೆ ಒಳಗಾಗಿ ಮೈದಾನದಿಂದ ಹೊರನಡೆದಿದ್ದರು. ಅವರು ಸಂಪೂರ್ಣ ಓವರ್ ಕೋಟಾವನ್ನೂ ಮುಗಿಸಿರಲಿಲ್ಲ.
ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಎಸ್ಆರ್ಹೆಚ್ ಮೂಲ, ಗಾಯದ ಕಾರಣ ವೇಗಿ ಶ್ರೀಮಂತ ಕ್ರಿಕೆಟ್ ಲೀಗ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಭುವಿ ಮುಂದಿನ ಯಾವುದೇ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ. ಏಕೆಂದರೆ ಅವರು ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ತಂಡಕ್ಕೆ ಬಹುದೊಡ್ಡ ಹೊಡೆತವಾಗಿದೆ. ಬೌಲಿಂಗ್ ತಂಡವನ್ನು ಮುನ್ನಡೆಸುತ್ತಿದ್ದ ಬೌಲರ್ ತಂಡದಲ್ಲಿಲ್ಲ ಎಂದರೆ ಅದು ಊಹಿಸಿಕೊಳ್ಳಲು ಅಸಾಧ್ಯ. ಅಲ್ಲದೇ ಅವರು ಕೇವಲ ಬೌಲರ್ ಅಲ್ಲದೇ ತಂಡದ ನಾಯಕತ್ವದ ಒಂದು ಪ್ರಮುಖ ಭಾಗವಾಗಿದ್ದರು ಎಂದು ಎಸ್ಆರ್ಹೆಚ್ ಸುದ್ದಿ ಮೂಲ ತಿಳಿಸಿದೆ.
ಭುವನೇಶ್ವರ್ ಕುಮಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 19ನೇ ಓವರ್ನಲ್ಲಿ ಬೌಲಿಂಗ್ ಮಾಡಲಾಗದೇ ಮೈದಾನ ತೊರೆದಿದ್ದರು. ಎರಡು ಬಾರಿ ಬೌಲಿಂಗ್ ಮಾಡಲು ಪ್ರಯತ್ನ ಪಟ್ಟರು ನೋವಿನಿಂದ ಸಾಧ್ಯವಾಗಿರಲಿಲ್ಲ. ಕೊನೆಗೆ ಪಿಸಿಯೋ ಸಹಾಯದಿಂದ ಹೊರಬಂದಿದ್ದರು.
ಐಪಿಎಲ್ನಲ್ಲಿ 2 ಬಾರಿ ಪರ್ಪಲ್ ಕ್ಯಾಪ್ ಪಡೆದಿರುವ ಭುವಿಯಂತಹ ಬೌಲರ್ ಟೂರ್ನಿಯಿಂದ ಹೊರಬಿದ್ದಿರುವುದು ನಿಜಕ್ಕೂ ಹೈದರಾಬಾದ್ ತಂಡಕ್ಕೆ ತುಂಬಲಾರದ ನಷ್ಟವಾಗಿದೆ.