ಮುಂಬೈ:ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ವೈಯಕ್ತಿಕ ಕಾರಣದಿಂದ 13ನೇ ಐಪಿಎಲ್ನಿಂದ ಹೊರಬಂದಿದ್ದಾರೆ. ಇದರ ಬಗ್ಗೆ 2 ದಿನಗಳಿಂದ ಮಾತನಾಡದಿದ್ದ ಅವರು ಇದೀಗ ತಮ್ಮ ಕುಟುಂಬದಲ್ಲಾಗಿರುವ ಧಾರುಣ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ರೈನಾ ಹೊರ ಬರುತ್ತಿದ್ದಂತೆ ಅವರ ನಿರ್ಧಾರ ಸುತ್ತಾ ಹಲವಾರು ವಿವಾಧ ಏರ್ಪಟ್ಟಿತ್ತು. ಧೋನಿಯಂತ ರೂಮ್ ನೀಡದಿದ್ದಕ್ಕೇ ಹೊರಬಂದಿದ್ದಾರೆ ಎಂಬುದು ಒಂದು ಕಡೆಯಾದರೆ ರೈನಾ ಮೇಲೆ ಸಿಎಸ್ಕೆ ಮಾಲೀಕ ಶ್ರೀನಿವಾಸನ್ ವಾಗ್ದಾಳಿ ನಡೆಸಿದ್ದರು. ನಂತರ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸಿದ್ದಲ್ಲೆ ತಾವೂ ರೈನಾ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದರು.
ಇದೀಗ ತಮ್ಮ ಮೌನವನ್ನು ಮುರಿದಿರುವ ರೈನಾ ಪಂಜಾಬ್ನ ತಮ್ಮ ಅತ್ತೆ(ತಂದೆಯ ಸಹೋದರಿ) ಮನೆಯಲ್ಲಾಗಿರುವ ದಾರುಣ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ಪಂಜಾಬ್ನಲ್ಲಿ ನನ್ನ ಕುಟುಂಬದ ಮೇಲೆ ನಡೆದಿರುವ ದಾಳಿ ಭಯಾನಕತೆಯನ್ನು ಮೀರಿದೆ. ನನ್ನ ಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ಅವರ ಮಕ್ಕಳ ಮೇಲೆ ತೀವ್ರಕರವಾದ ಹಲ್ಲೆ ಮಾಡಲಾಗಿದೆ. ದುರದೃಷ್ಟವಶಾತ್ ಕಳೆದ ರಾತ್ರಿ ನನ್ನ ಅತ್ತೆಯ ಮಗನೋರ್ವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾನೆ. ನಮ್ಮ ಅತ್ತೆ ಕೂಡ ಈಗಲೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಆದರೆ ಇಲ್ಲಿಯವರೆಗೂ ಆ ರಾತ್ರಿ ಏನು ನಡೆದಿದೆ ಎಂದು ಸ್ಪಷ್ಟವಾಗಿ ಗೊತ್ತಿಲ್ಲ. ಮತ್ತು ಯಾರು ಮಾಡಿದ್ದಾರೆಂದು ತಿಳಿದಿಲ್ಲ.ಈ ಘಟನೆಯ ಕಡೆ ಗಮನ ಹರಿಸಬೇಕೆಂದು ನಾನು ಪಂಜಾಬ್ ಪೊಲೀಸರಿಗೆ ಮನವಿ ಮಾಡಿಕೊಳ್ಳುತ್ತೇನೆ. ನಾವು ಈ ಘೋರಕೃತ್ಯವನ್ನು ಯಾರು ಮಾಡಿದ್ದಾರೆಂದು ತಿಳಿದುಕೊಳ್ಳು ಬಯಸಿದ್ದೇವೆ. ಆ ದುಷ್ಟರು ಮತ್ತೊಂದು ಕೃತ್ಯವನ್ನು ಮಾಡಲು ನಾವು ಬಿಡಬಾರದೆಂದು ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ ಪಂಜಾಬ್ನ ಪಠಾಣ್ಕೋಟ್ನಲ್ಲಿ ತಮ್ಮ ಮನೆಯ ಮಹಡಿಯ ಮೇಲೆ ಮಲಗಿದ್ದ ವೇಳೆ ರೈನಾ ಸೋದರತ್ತೆಯ ಕುಟುಂಬದವರ ಮೇಲೆ ಅಪರಿಚಿತರ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಆ ಘಟನೆಯಲ್ಲಿ ರೈನಾ ಮಾವ ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದವರು ತೀವ್ರ ಗಾಯಗೊಂಡಿದ್ದರು ಎಂದು ತಿಳಿದುಬಂದಿತ್ತು.