ಲಂಡನ್ :ವಿಶ್ವಕಪ್ ಇತಿಹಾಸದಲ್ಲೇ 2019ರ ಫೈನಲ್ ಪಂದ್ಯ ಮಹತ್ವವಾದ ಸ್ಥಾನ ಪಡೆದುಕೊಂಡಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಚಾಂಪಿಯನ್ ಘೋಷಣೆಗಾಗಿ ಸೂಪರ್ ಓವರ್ ನಡೆದಿದ್ದ ಪಂದ್ಯದ ಕೋಟ್ಯಾಂಟರ್ ಅಭಿಮಾನಿಗಳನ್ನು ರೋಮಾಂಚನವನ್ನುಂಟು ಮಾಡಿತ್ತು. ಈ ಸೂಪರ್ ಓವರ್ಗೂ ಮುನ್ನ ಇಂಗ್ಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಬೆನ್ ಸ್ಟೋಕ್ಸ್ ಸಿಗರೇಟ್ ಬ್ರೇಕ್ ತೆಗೆದುಕೊಂಡಿದ್ದ ವಿಷಯ ಈಗ ಬಹಿರಂಗಗೊಂಡಿದೆ.
241 ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿದ್ದ ಸ್ಟೋಕ್ಸ್ 98 ಎಸೆತಗಳಲ್ಲಿ ಔಟಾಗದೆ 84 ರನ್ ಗಳಿಸಿದ್ದರು. ಇವರ ಬ್ಯಾಟಿಂಗ್ ನೆರವಿನಿಂದ ಪಂದ್ಯ ಟೈ ಆಗಿತ್ತು. ಜೊತೆಗೆ ಸೂಪರ್ ಓವರ್ನಲ್ಲೂ ಅವರು 8 ರನ್ಗಳಿಸಿ 16 ರನ್ಗಳ ಟಾರ್ಗೆಟ್ಗೆ ನೆರವಾಗಿದ್ದರು.
ಸುಮಾರು 27 ಸಾವಿರ ಮಂದಿ ವೀಕ್ಷಕರಿದ್ದ ಲಾರ್ಡ್ಸ್ ಮೈದಾನದಲ್ಲಿ ಸೂಪರ್ ಓವರ್ಗೂ ಮುನ್ನ ತೀವ್ರ ಒತ್ತಡಕ್ಕೊಳಗಾಗಿದ್ದ ಸ್ಟೋಕ್ಸ್ ಡ್ರೆಸ್ಸಿಂಗ್ ರೂಮ್ಗೆ ಓಡಿ ಹೋಗಿ ಸಿಗರೇಟ್ ಸೇದಿ ಬಂದಿದ್ದರು ಎಂಬುದು ಬಹಿರಂಗಗೊಂಡಿದೆ.
"ಸುಮಾರು 2 ಗಂಟೆ 27 ನಿಮಿಷಗಳ ಕಾಲ ನಂಬಲಸಾಧ್ಯವಾದ ಬ್ಯಾಟಿಂಗ್ ನಡೆಸಿದ್ದ ಸ್ಟೋಕ್ಸ್ ಬೆವರು ಮತ್ತು ಕೊಳಕಿನಿಂದ ಆವೃತ್ತರಾಗಿದ್ದರು. ಈ ಸಂದರ್ಭದಲ್ಲಿ ಸ್ಟೋಕ್ಸ್ ಡ್ರೆಸ್ಸಿಂಗ್ ರೂಮಿನ ಹಿಂಭಾಗಕ್ಕೆ ತೆರಳುತ್ತಾರೆ. ನಂತರ ಸ್ನಾನ ಮಾಡಿ, ಒಂದು ಸಿಗರೇಟ್ ಸೇದುವ ಮೂಲಕ ತಮ್ಮ ತಲೆಯಲ್ಲಿದ್ದ ಎಲ್ಲಾ ಒತ್ತಡವನ್ನು ತಕ್ಕ ಮಟ್ಟಿಗೆ ನಿವಾರಣೆ ಮಾಡಿಕೊಂಡು ಸೂಪರ್ ಓವರ್ನಲ್ಲಿ ಬ್ಯಾಟಿಂಗ್ ನಡೆಸಲು ಬಂದಿದ್ದರೆಂದು" ನಿಕ್ ಹಾಲ್ಟ್ ಹಾಗೂ ಸ್ಟೇವ್ ಜೇಮ್ಸ್ ಬರೆದಿರುವ ಮಾರ್ಗನ್ ಬಾಯ್ಸ್ ಪುಸ್ತಕದಲ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ನೀಡಿದ್ದ 16 ರನ್ಗಳನ್ನು ಬೆನ್ನೆತ್ತಿದ ನ್ಯೂಜಿಲ್ಯಾಂಡ್ ತಂಡ ದುರಾದೃಷ್ಟವಸಾತ್ 15 ರನ್ಗಳಿಸಲಷ್ಟೇ ಶಕ್ತವಾಗುತ್ತದೆ. ಆದರೆ, ಮೊದಲೇ ನಿರ್ಣಯಿಸಿದಂತೆ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ತಂಡ ಎಂದು ಘೋಷಣೆ ಮಾಡಲಾಗುತ್ತದೆ. ಪಂದ್ಯದಲ್ಲಿ ಇಂಗ್ಲೆಂಡ್ 16 ಹಾಗೂ ನ್ಯೂಜಿಲ್ಯಾಂಡ್ 17 ಬೌಂಡರಿ ಸಿಡಿಸಿರುತ್ತವೆ.