ಜೋಹಾನ್ಸ್ ಬರ್ಗ್:ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್ ಹಾಗೂ ಐಸಿಸಿ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿರುವ ಬೆನ್ ಸ್ಟೋಕ್ಸ್ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ವೇಳೆ ಅಭಿಮಾನಿಯೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ, ಅಸಭ್ಯ ಪದ ಬಳಸಿ ನಂತರ ಟ್ವಿಟರ್ನಲ್ಲಿ ಕ್ಷಮೆ ಕೇಳಿದ್ದಾರೆ.
ವಾಂಡರರ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವೇಳೆ ಬೆನ್‌ಸ್ಟೋಕ್ಸ್ ಕೇವಲ 2 ರನ್ಗಳಿಸಿ ಆ್ಯನ್ರಿಚ್ ನಾರ್ಟ್ಜ್ ಅವರ ಬೌಲಿಂಗ್ಗೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಪೆವಿಲಿಯನ್ಗೆ ವಾಪಸ್ಸಾಗುವ ವೇಳೆ ಅಭಿಮಾನಿಯೊಂದಿಗೆ ವಾಗ್ವಾದಕ್ಕಿಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಾಗ್ವಾದದ ವಿಡಿಯೋ ವೈರಲ್ ಆಗುತ್ತಿದ್ದಂತೆ ಟ್ವೀಟ್ ಮೂಲಕ ಸ್ಟೋಕ್ಸ್ ಕ್ಷಮೆ ಕೇಳಿದ್ದಾರೆ. ಪಂದ್ಯದ ನೇರಪ್ರಸಾರವಾಗುತ್ತಿದ್ದ ವೇಳೆ ನಾನು ಔಟ್ ಆದ ನಂತರ ಕೇಳಿಸುವಂತೆ ಆ ರೀತಿಯ ಭಾಷೆ ಬಳಕೆ ಮಾಡಿರುವುದಕ್ಕೆ ಕ್ಷಮೆ ಕೋರುತ್ತೇನೆ. ನಾನು ಆ ರೀತಿ ವರ್ತಿಸಬಾರದಿತ್ತು ಎಂದು ಹೇಳಿದ್ದಾರೆ.
ಮೈದಾನ ಬಿಟ್ಟು ಹೋಗುವ ವೇಳೆ ಜನಸಂದಣಿಯಿಂದ ನಾನು ಪದೇ ಪದೇ ನಿಂದನೆಗೆ ಒಳಗಾಗುತ್ತಿದ್ದೇನೆ. ಆದರೆ ನನ್ನ ಪ್ರತಿಕ್ರಿಯೆ ವೃತ್ತಿಪರತೆಗೆ ವಿರೋಧವಾಗಿದೆ. ಆದ್ದರಿಂದ ಅಸಭ್ಯ ಪದ ಬಳಸಿದ್ದಕ್ಕೆ ಗೌರವಯುತವಾಗಿ ಕ್ಷಮೆ ಕೇಳುತ್ತಿದ್ದೇನೆ. ಅದರಲ್ಲೂ ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸುತ್ತಿರುವ ಯುವ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದಿದ್ದಾರೆ.
ಇಲ್ಲಿಯವರೆಗೆ ಟೆಸ್ಟ್ ಪಂದ್ಯಗಳಿಗೆ ಎರಡು ತಂಡಗಳ ಅಭಿಮಾನಿಗಳಿಂದ ಉತ್ತಮ ಬೆಂಬಲ ದೊರೆತಿದೆ. ಈ ಪಂದ್ಯವನ್ನು ನಾವು ಗೆಲ್ಲಲು ನಿರ್ಧರಿಸಿದ್ದೇವೆ. ಈ ಘಟನೆ ಸ್ಪರ್ಧಾತ್ಮಕ ಕ್ರಿಕೆಟ್ ಸರಣಿಗೆ ಯಾವುದೇ ರೀತಿಯ ಧಕ್ಕೆ ತರುವುದಿಲ್ಲ ಎಂದು ಸ್ಟೋಕ್ಸ್ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆನ್‌ಸ್ಟೋಕ್ಸ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಾಡಿರುವ ಅಸಭ್ಯ ಪದ ಬಳಕೆ ಐಸಿಸಿಯ 1ನೇ ಹಂತದ ನಿಯಮ ಉಲ್ಲಂಘನೆಯಾಗುತ್ತದೆ. ಆದರೆ ಐಸಿಸಿ ಇಲ್ಲಿಯವರೆಗೆ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಾಮಾನ್ಯವಾಗಿ ಈ ರೀತಿಯ ನಿಯಮಬಾಹಿರ ಕೃತ್ಯಕ್ಕೆ ಆಟಗಾರನ ಪಂದ್ಯದ ಸಂಭಾವನೆಯ ಶೇ 50 ರಷ್ಟನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ.