ಲಂಡನ್: ಇಂಗ್ಲೆಂಡಿನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ 2019ರ ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2019ರ ವಿಶ್ವಕಪ್ನಲ್ಲಿ 5 ಅರ್ಧಶತಕದ ಸಹಿತ 465 ರನ್ ಗಳಿಸಿದ್ದ ಸ್ಟೋಕ್ಸ್ ಫೈನಲ್ನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಅಲ್ಲದೆ ಆ್ಯಶಸ್ ಟೆಸ್ಟ್ ಸರಣಿಯಲ್ಲಿ 441 ರನ್ಗಳಿಸಿ ಇಂಗ್ಲೆಂಡ್ ತಂಡದ ಗರಿಷ್ಠ ಸ್ಕೋರರ್ ಎನಿಸಿದ್ದರು. 3ನೇ ಆ್ಯಶಸ್ ಟೆಸ್ಟ್‌ನಲ್ಲಿ ಕೊನೆಯ ವಿಕೆಟ್135 ರನ್ ಸೇರಿಸಿ ಒಂದು ವಿಕೆಟ್ ಗೆಲುವು ಸಾಧಿಸಲು ನೆರವಾಗಿದ್ದರು. ಈ ಎಲ್ಲ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಂಡು ವಿಸ್ಡನ್ ಸ್ಟೋಕ್ಸ್ಗೆ ವರ್ಷದ ಕ್ರೀಡಾಪಟು ಅವಾರ್ಡ್ ನೀಡಿದೆ.
ಕಳೆದ ಮೂರು ವರ್ಷಗಳಿಂದ ವಿಸ್ಡನ್ ಲೀಡಿಂಗ್ ಕ್ರಿಕೆಟರ್ ಅವಾರ್ಡ್ ಪಡೆದಿದ್ದ ಭಾರತದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಮೂಲಕ ಪ್ರಶಸ್ತಿ ಪಡೆಯುವಲ್ಲಿ ಸ್ಟೋಕ್ಸ್ ಯಶಸ್ವಿಯಾಗಿದ್ದಾರೆ. ಬೆನ್ ಸ್ಟೋಕ್ಸ್ 2005ರ ಬಳಿಕ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಇಂಗ್ಲೆಂಡಿನ ಮೊದಲ ಆಟಗಾರರಾಗಿದ್ದಾರೆ. 2005ರಲ್ಲಿ ಮಾಜಿ ನಾಯಕ ಆ್ಯಂಡ್ರ್ಯೂ ಫ್ಲಿಂಟಾಫ್ ಈ ಪ್ರಶಸ್ತಿಗೆ ಪಾತ್ರರಾಗಿದ್ದರು.
ಇನ್ನು ಮಹಿಳಾ ಕ್ರಿಕೆಟಿಗರ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಆಸ್ಟ್ರೇಲಿಯದ ಆಲ್‌ರೌಂಡರ್ ಎಲಿಸೆ ಪೆರ್ರಿ ವಿಸ್ಡನ್ ವರ್ಷದ ಶ್ರೇಷ್ಠ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಭಾರತದ ಸ್ಮತಿ ಮಂದಾನಾ ಪಡೆದಿದ್ದರು.
ಆಸ್ಟ್ರೇಲಿಯದ ಆಲ್‌ರೌಂಡರ್ ಎಲಿಸೆ ಪೆರ್ರಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರಿಂದ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ವರ್ಷ ನಡೆದಿದ್ದ ಏಕೈಕ ಟೆಸ್ಟ್‌ನಲ್ಲಿ ಅವರು 116 ಮತ್ತು ಅಜೇಯ 76 ರನ್ ಸಿಡಿಸಿ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು.