ಮ್ಯಾಂಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 459 ರನ್ಗಳ ಬೃಹತ್ ಮೊತ್ತ ಪೇರಿಸಿದೆ, ಅಲ್ಲದೆ ವಿಂಡೀಸ್ಗೆ ಆರಂಭಿಕ ಆಘಾತ ನೀಡಿದೆ.
ಮೊದಲ ದಿನ ಮಳೆಯಿಂದ ಪಂದ್ಯವು ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿದ್ದರೂ ದಿನದಾಟದ ಅಂತ್ಯಕ್ಕೆ ಆಂಗ್ಲರು 82 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದ್ದರು. ಅಜೇಯ ಅರ್ಧಶತಕ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲಿ ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ ಭರ್ಜರಿ ಶತಕಗಳನ್ನು ಸಿಡಿಸಿ ಇಂಗ್ಲೆಂಡ್ನ ಬೃಹತ್ ಮೊತ್ತಕ್ಕೆ ನೆರವಾದರು.
ಡೊಮಿನಿಕ್ ಸಿಬ್ಲಿ ತಾಳ್ಮೆಯ 120 ರನ್ ಹಾಗೂ ಬೆನ್ ಸ್ಟೋಕ್ಸ್ 176 ರನ್ ಬಾರಿಸಿದರಲ್ಲದೆ, ನಾಲ್ಕನೇ ವಿಕೆಟ್ಗೆ 260 ರನ್ಗಳ ಭರ್ಜರಿ ಜೊತೆಯಾಟವಾಡಿದರು. 2ನೇ ದಿನದಾಟದ ಪೂರ್ಣ ಪ್ರಾರಮ್ಯ ಮೆರೆದ ಆಂಗ್ಲರು ವಿಂಡೀಸ್ ಬೌಲರ್ಗಳನ್ನು ಕಾಡಿದರು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಶ್ ಬಟ್ಲರ್ 41, ಡಾನ್ ಬೆಸ್ 31 ರನ್ಗಳ ಕಾಣಿಕೆ ನೀಡಿದರು. ಒಟ್ಟಾರೆ ಆಂಗ್ಲ ತಂಡ 162 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 459 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ವಿಂಡೀಸ್ ಪರ ಸ್ಪಿನ್ನರ್ ರೋಸ್ಟನ್ ಚೇಸ್ 5 ವಿಕೆಟ್ ಕಬಳಿಸಿದರು.
ಬಳಿಕ ಬ್ಯಾಟಿಂಗ್ಗಳಿದ ವಿಂಡೀಸ್ ತಂಡಕ್ಕೆ ಯುವ ವೇಗಿ ಸ್ಯಾಮ್ ಕರನ್ ಆರಂಭಿಕ ಆಘಾತ ನೀಡಿದ್ದಾರೆ. 32 ರನ್ ಗಳಿಸಿರುವ ಕೆರಿಬಿಯನ್ ತಂಡ ಒಂದು ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಆಟಗಾರ ಜಾನ್ ಕಾಂಪ್ಬೆಲ್ 12 ರನ್ ಗಳಿಸಿ ಔಟ್ ಆದರು. ಕ್ರೇಗ್ ಬ್ರಾಥ್ವೈಟ್ 6 ಹಾಗೂ ನೈಟ್ ವಾಚ್ಮನ್ ಅಲ್ಜಾರಿ ಜೋಸೆಫ್ 14 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗೆದ್ದಿರುವ ಕೆರಿಬಿಯನ್ನರು ಈ ಪಂದ್ಯ ಜಯಿಸಿ ಸರಣಿ ಗೆಲುವಿನ ವಿಶ್ವಾಸದಲ್ಲಿದ್ದರೆ, ಆಂಗ್ಲರು ಸರಣಿಯಲ್ಲಿ ಸಮಬಲ ಸಾಧಿಸಲು ಈ ಪಂದ್ಯ ಗೆಲ್ಲಲೇಬೇಕಿದೆ.