ಮ್ಯಾಂಚೆಸ್ಟರ್ :ಇಂಗ್ಲೆಂಡ್ ಸ್ಟಾರ್ ಕ್ರಿಕೆಟರ್ ಬೆನ್ ಸ್ಟೋಕ್ಸ್ ನೂತನವಾಗಿ ಐಸಿಸಿ ಬಿಡುಗಡೆ ಮಾಡಿರುವ ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ಆಲ್ರೌಂಡರ್ ಶ್ರೇಯಾಂಕ ಪಟ್ಟಿಯಲ್ಲಿ ಬೆನ್ಸ್ಟೋಕ್ಸ್ ಮೊದಲ ಸ್ಥಾನ ಆಕ್ರಮಿಸಿಕೊಂಡಿದ್ದಾರೆ. ಈ ಮೂಲಕ ಆ್ಯಂಡ್ರ್ಯೂ ಫ್ಲಿಂಟಾಫ್ ಬಳಿಕ ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಿದ ಮೊದಲ ಇಂಗ್ಲೆಂಡ್ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಫ್ಲಿಂಟಾಫ್ 2006ರಲ್ಲಿ ಮೊದಲ ಸ್ಥಾನ ಪಡೆದಿದ್ದರು.
ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಆಲ್ರೌಂಡರ್ ವಿಭಾಗದಲ್ಲಿ ಕಳೆದ 18 ತಿಂಗಳಿಂದ ಮೊದಲ ಸ್ಥಾನದಲ್ಲಿದ್ದರು. ಇದೀಗ ಅವರನ್ನು ಸ್ಟೋಕ್ಸ್ ಹಿಂದಿಕ್ಕಿದ್ದಾರೆ. ಜೊತೆಗೆ ಅವರಿಗಿಂತ 38 ರೇಟಿಂಗ್ ಅಂಕವನ್ನು ಪಡೆದಿದ್ದಾರೆ.