ಲಂಡನ್ :ಇತ್ತೀಚೆಗೆ ವೈಯಕ್ತಿಕ ಕಾರಣ ನೀಡಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ಬಂದಿದ್ದ ಇಂಗ್ಲೆಂಡ್‌ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಐಪಿಎಲ್ನಿಂದಲೂ ಹಿಂದೆ ಸರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
13ನೇ ಆವೃತ್ತಿಯ ಐಪಿಎಲ್ಗೆ ಕೇವಲ 18 ದಿನ ಮಾತ್ರ ಉಳಿದಿವೆ. ಆದರೆ, ಒಬ್ಬರ ಹಿಂದೆ ಒಬ್ಬ ಸ್ಟಾರ್ ಆಟಗಾರರು ತಂಡದಿಂದ ಹೊರ ಹೋಗುತ್ತಿದ್ದಾರೆ. ಈಗಾಗಲೇ ಇಂಗ್ಲೆಂಡ್ ತಂಡದ ಜೇಸನ್ ರಾಯ್ ಮತ್ತು ಕ್ರಿಸ್ ವೋಕ್ಸ್ ಐಪಿಎಲ್ನಿಂದ ಹೊರಗುಳಿದಿದ್ದಾರೆ. ನಿನ್ನೆ ಆಸ್ಟ್ರೇಲಿಯಾದ ಕೇನ್ ರಿಚರ್ಡ್ಸನ್ ತಮ್ಮ ಪತ್ನಿ ಮೊದಲ ಮಗುವಿಗೆ ಜನ್ಮ ನೀಡುತ್ತಿರುವುದರಿಂದ ತಾವೂ ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ಆದರೆ, ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಯುಎಇಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಸ್ಟೋಕ್ಸ್ ತಂದೆ ಬ್ರೈನ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದ ಜೊತೆಯಿರಲು ಪಾಕ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರ ಬಂದಿದ್ದ ಅವರು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲೂ ವಿಶ್ರಾಂತಿ ಪಡೆದಿದ್ದಾರೆ. ಇದೀಗ ಇದೇ ಕಾರಣದಿಂದ ಐಪಿಎಲ್ನಿಂದಲೂ ಹೊರಗುಳಿಯಬಹುದು ಎನ್ನಲಾಗುತ್ತಿದೆ.
ಕಳೆದ ಎರಡು ಆವೃತ್ತಿಗಳಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಸ್ಟೋಕ್ಸ್ ತಮ್ಮ ಲಭ್ಯತೆ ಮತ್ತು ಅಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ರಾಯಲ್ಸ್ ಕೂಡ ಸ್ಟೋಕ್ಸ್ ಅಭಿಪ್ರಾಯಕ್ಕಾಗಿ ಕಾಯುತ್ತಿದೆ. ಒಂದು ವೇಳೆ ಸ್ಟೋಕ್ಸ್ ಗೈರಾಗುವ ಸಾಧ್ಯತೆಯಿದ್ದರೆ, ಬೇರೆ ಆಲ್ರೌಂಡರ್ ಆಟಗಾರನನ್ನ ನೋಡಿಕೊಳ್ಳಬೇಕಾಗುತ್ತದೆ. ವರದಿಗಳ ಪ್ರಕಾರ ಸ್ಟೋಕ್ಸ್ ಅಲಭ್ಯರಾದ್ರೆ ಆಸ್ಟ್ರೇಲಿಯಾದ ಬೆನ್ ಕಟಿಂಗ್ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.