ಕರಾಚಿ: ಫಿಕ್ಸಿಂಗ್ ವಿಚಾರದಲ್ಲಿ ಬೇರೆ ಕ್ರಿಕೆಟಿಗರಿಗೆ ಒಂದು ನ್ಯಾಯ , ನನಗೆ ಬೇರೆ ನ್ಯಾಯಾನ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಉಮರ್ ಅಕ್ಮಲ್ ಆರೋಪವನ್ನು ಎದುರಿಸುತ್ತಿದ್ದರೂ ಅವರ ವಿರುದ್ಧ ಇರುವ ನಿಷೇಧ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ಅಮೀರ್, ಆಸಿಫ್ ಮತ್ತು ಸಲ್ಮಾನ್ ಅವರಿಗೂ ಮತ್ತೆ ಕ್ರಿಕೆಟ್ ಆಡಲು ಅವಕಾಶ ನೀಡಲಾಗಿದೆ. ಆದರೆ ನನ್ನನ್ನು ಏಕೆ ಬಿಡುತ್ತಿಲ್ಲ? ನನ್ನ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಇದರಲ್ಲಿ ಸ್ಪಷ್ಟವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನ ದೇಶಕ್ಕಾಗಿ ಆಡಲು ಹಾಗೂ ಪಾಕಿಸ್ತಾನ ತಂಡದಲ್ಲಿ ಹಿಂದೂ ಕ್ರಿಕೆಟಿಗನಾಗಿ ಪ್ರತಿನಿಧಿಸಿದ್ದು ನನಗೆ ತುಂಬಾ ಸಂತೋಷವಿದೆ. ನನ್ನ ತಂಡ ಗೆದ್ದಾಗ ಅದು ನಾನೆ ಗೆದ್ದಂತೆ ಭಾಸವಾಗುತ್ತದೆ. ನಾನು ನನ್ನ ದರ್ಮವನ್ನು ಮಧ್ಯೆ ತಂದು ಮಾತನಾಡುತ್ತಿದ್ದೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಎಂದಿಗೂ ಹಾಗೆ ಯೋಚಿಸಿಲ್ಲ. ಸಮಸ್ಯೆ ಪಾಕ್ ಕ್ರಿಕೆಟ್ ಮಂಡಳಿಯಲ್ಲಿದೆ. ಎಲ್ಲಾ ಆಟಗಾರರೊಂದಿಗೆ ಪಿಸಿಬಿ ನಡವಳಿಕೆ ಅದ್ಭುತವಾಗಿದೆ. ನನ್ನ ವಿಚಾರಕ್ಕೆ ಬಂದಾಗ ಮಾತ್ರ ಕಡೆಗಣಿಸಲಾಗುತ್ತಿದೆ. ಇದು ನನಗೆ ಬಹಳಷ್ಟು ನೋವುಂಟು ಮಾಡಿದೆ ಎಂದು ಕನೇರಿಯಾ ತಿಳಿಸಿದ್ದಾರೆ.
ಪಾಕಿಸ್ತಾನ ತಂಡದ ಪರ 61 ಟೆಸ್ಟ್ ಪಂದ್ಯಗಳನ್ನಾಡಿರುವ ಕನೇರಿಯಾ 261 ವಿಕೆಟ್ ಹಾಗೂ 18 ಏಕದಿನ ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಅನಿಲ್ ದಲ್ಪತ್ ನಂತರ ಪಾಕಿಸ್ತಾನ ಪರ ಆಡಿದ ಎರಡನೇ ಹಿಂದೂ ಆಟಗಾರನಾಗಿದ್ದ ಕನೇರಿಯಾ 2012ರಲ್ಲಿ ಮ್ಯಾಚ್ ಫಿಕ್ಸಿಂಗ್ನಲ್ಲಿ ಸಿಲುಕಿ ಅಜೀವಾ ನಿಷೇಧಕ್ಕೊಳಗಾಗಿದ್ದರು.