ನವದೆಹಲಿ: ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ನಡುವಿನ ಟಿ-20 ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರು ಭಾಗವಹಿಸದಿರಲು ಕಾರಣ ಏನೆಂದು ಪಿಸಿಬಿ ಸ್ಪಷ್ಟಪಡಿಸಿದೆ.
ಬಾಂಗ್ಲಾದೇಶ 2020ರ ಮಾರ್ಚ್ ತಿಂಗಳ 16 ಮತ್ತು 20 ರಂದು ಈ ಟೂರ್ನಿಯನ್ನ ನಡೆಸಲು ತೀರ್ಮಾನಿಸಿದೆ. ಆದರೆ ಆ ಸಮಯದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ನಡೆಯುತ್ತಿರುತ್ತದೆ. ಹೀಗಾಗಿ ಪಾಕ್ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ದಿನಾಂಕ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಆಟಗಾರರು ಭಾಗವಹಿಸಲ್ಲ ಎಂದು ಈಗಾಗಲೇ ಬಾಂಗ್ಲಾದೇಶಕ್ಕೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದ್ದೇವೆ. ಅವರೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ದುರಾದೃಷ್ಟಕರ ಸಂಗತಿ ಏನೆಂದರೆ, ವಾಸ್ತವವನ್ನು ತಿರುಚುವ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳನ್ನ ದಾರಿತಪ್ಪಿಸಲಾಗುತ್ತಿದೆ ಎಂದು ಪಿಸಿಬಿ ವಕ್ತಾರ ಆರೋಪಿಸಿದ್ದಾರೆ ಎಂದು ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ.