ಮುಂಬೈ:ಡೆಡ್ಲಿ ವೈರಸ್ ಕೊರೊನಾದಿಂದಾಗಿ ಮೂಂದೂಡಿಕೆಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಖಂಜಾಚಿ ಅರುಣ್ ದುಮ್ಲಾ ಹೇಳಿಕೆ ನೀಡಿದ್ದಾರೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ದಿನಾಂಕ ಮರು ನಿಗದಿ ಪಡಿಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ರೀತಿಯಲ್ಲೂ ನಾವು ಚಿಂತನೆ ನಡೆಸಿಲ್ಲ. ದೇಶದಲ್ಲಿನ ಲಾಕ್ಡೌನ್ ಸಂಪೂರ್ಣವಾಗಿ ಮುಕ್ತಾಯಗೊಂಡ ಬಳಿಕ ಇದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 29ರಿಂದ ಆರಂಭಗೊಳ್ಳಬೇಕಾಗಿತ್ತು. ಆದರೆ, ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಮುಂದೂಡಿಕೆ ಮಾಡಲಾಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿಯಿಂದ ಇಲ್ಲಿಯವರೆಗೆ ಯಾವುದೇ ದಿನಾಂಕ ನಿಗದಿಗೊಂಡಿಲ್ಲ. ಇದರ ಮಧ್ಯೆ ಅದು ನಡೆಯುವುದೇ ಡೌಟ್ ಎಂಬ ಮಾತುಗಳು ಕೇಳಿ ಬರುತ್ತಿವೆ.
ಟೂರ್ನಮೆಂಟ್ನಲ್ಲಿ ಭಾಗಿಯಾಗಲು ಬೇರೆ ಬೇರೆ ದೇಶಗಳಿಂದ ಪ್ಲೇಯರ್ಸ್ ಭಾರತಕ್ಕೆ ಬರಬೇಕಾಗಿದ್ದು, ಅವರಿಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಿ ಐಪಿಎಲ್ ನಡೆಸುವುದು ಹೇಗೆ? ಎಂದು ಪ್ರಶ್ನೆ ಮಾಡಿರುವ ಅವರು, ಕೆಲವೊಂದು ಕಡೆ ಐಪಿಎಲ್ ಬೇಗ ಆರಂಭಗೊಳ್ಳಲಿದೆ ಎಂಬ ಮಾತು ಹರಿದಾಡುತ್ತಿದ್ದು, ಅದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸದೇ ಇರುವುದರಿಂದ ಪ್ರಸಕ್ತ ವರ್ಷ ಭಾರತೀಯ ಕ್ರಿಕೆಟ್ ಮಂಡಳಿಗೆ ಬರೋಬ್ಬರಿ 3,869.5 ಕೋಟಿ ರೂ ನಷ್ಟವಾಗಲಿದ್ದು, ಇದರಲ್ಲಿ 3269.5 ರೂ ಬ್ರಾಡ್ಕಾಸ್ಟ್ಗೆ ಸೇರಿದ್ದಾಗಿದೆ
ಭಾರತ-ಆಸ್ಟ್ರೇಲಿಯಾ ಸರಣಿ ಆರಂಭಿಸುವುದೇ ಉತ್ತಮ: ರೋಹಿತ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಆದರೆ, ಅಕ್ಟೋಬರ್ 2020ರಿಂದ ಜನವರಿ 2021ವರೆಗೆ ಆರಂಭಗೊಳ್ಳಲಿರುವ ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ಆರಂಭ ಮಾಡುವ ಮೂಲಕ ಕ್ರಿಕೆಟ್ಗೆ ಚಾಲನೆ ನೀಡುವುದು ಉತ್ತಮ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಭಾರತ - ಆಸ್ಟ್ರೇಲಿಯಾ ಈ ಸರಣಿಯಲ್ಲಿ ನಾಲ್ಕು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ - 20 ಪಂದ್ಯಗಳು ಸೇರಿಕೊಂಡಿವೆ. ಡೇವಿಡ್ ವಾರ್ನರ್ ಜತೆ ಇನ್ಸ್ಟಾಗ್ರಾಂ ಲೈವ್ ಚಾಟ್ನಲ್ಲಿ ಭಾಗಿಯಾಗಿದ್ದ ವೇಳೆ ಈ ಮಾಹಿತಿ ಅವರು ಹಂಚಿಕೊಂಡಿದ್ದಾರೆ.